ಮುಖ್ಯಮಂತ್ರಿ ಸಿದ್ದರಾಮಯ್ಯ ದಿಲ್ಲಿಗೆ: ಕಾಂಗ್ರೆಸ್ ವಲಯದಲ್ಲಿ ಕುತೂಹಲ
ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು: ರಾಜ್ಯದ ‘ಸಚಿವ ಸಂಪುಟ ಪುನಾರಚನೆ’ ಚರ್ಚೆಯ ಬೆನ್ನಲ್ಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸದಿಲ್ಲಿಗೆ ಪ್ರಯಾಣ ಬೆಳೆಸಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಈ ಮಧ್ಯೆ ಆರೇಳು ಮಂದಿ ಸಚಿವ ಸ್ಥಾನದ ಆಕಾಂಕ್ಷಿ ಶಾಸಕರಲ್ಲಿ ಉತ್ಸಾಹ ಮನೆ ಮಾಡಿದ್ದರೆ, ಕೆಲವರನ್ನು ಸಂಪುಟದಿಂದ ಕೈಬಿಡುವ ಮಾತುಗಳು ಕೆಳಿಬಂದಿವೆ. ಆದರೆ, ಸಂಪುಟ ವಿಸ್ತರಣೆಗೆ ಹೈಕಮಾಂಡ್ ಹಸಿರು ನಿಶಾನೆ ನೀಡುತ್ತದೆಯೇ ಅಥವಾ ಮುಂದಕ್ಕೆ ಹಾಕುತ್ತದೆಯೇ ಎಂಬುದು ಚರ್ಚೆಗೆ ಗ್ರಾಸವಾಗಿದೆ.
ನಾಳೆ(ನ.29) ದಿಲ್ಲಿಯಲ್ಲಿ ನಡೆಯಲಿರುವ ಎಐಸಿಸಿ ಅಧಿವೇಶನದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ದಿಲ್ಲಿಗೆ ತೆರಳುತ್ತಿದ್ದು, ಪಕ್ಷದ ವರಿಷ್ಠರ ಜತೆ ಸಂಪುಟ ಪುನಾರಚನೆಯ ಬಗ್ಗೆ ಚರ್ಚೆ ನಡೆಸುವ ಸಾಧ್ಯತೆಗಳಿವೆ ಏಂದು ಹೇಳಲಾಗಿದೆ.
ಈ ನಡುವೆಯೇ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎರಡು ದಿನಗಳಿಂದ ದಿಲ್ಲಿಯಲ್ಲೇ ಮೊಕ್ಕಾಂ ಹೂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದಿಲ್ಲಿಗೆ ತೆರಳಿದ ನಂತರ ಉಭಯ ನಾಯಕರು, ವರಿಷ್ಠರನ್ನು ಭೇಟಿ ಮಾಡಿ ರಾಜ್ಯದ ಬೆಳವಣಿಗೆಗಳ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆಂದು ಗೊತ್ತಾಗಿದೆ.
ಕೆಪಿಸಿಸಿಗೆ ನೂತನ ಸಾರಥಿ: ಸಂಪುಟ ಪುನಾರಚನೆಯ ಜತೆ ಜತೆಗೆ ಕೆಪಿಸಿಸಿಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡುವ ಬಗ್ಗೆಯೂ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವರಿಷ್ಠರೊಂದಿಗೆ ಇದೇ ವೇಳೆ ಚರ್ಚೆ ನಡೆಸುವರು ಎಂದು ಹೇಳಲಾಗಿದೆ.
ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎರಡು ಹುದ್ದೆ ನಿಭಾಯಿಸುತ್ತಿದ್ದು, ಈ ಹಿಂದೆಯ ಸ್ವತಃ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರ ಹುದ್ದೆ ತೊರೆಯುವ ಮಾತುಗಳನ್ನಾಡಿದ್ದರು. ಆದರೆ ವರಿಷ್ಠರ ಒತ್ತಾಯದ ಮೇರೆಗೆ ಅವರು ಕೆಪಿಸಿಸಿ ಅಧ್ಯಕ್ಷರ ಹುದ್ದೆಯಲ್ಲೂ ಮುಂದುವರೆದಿದ್ದು, ಈಗ ರಾಜ್ಯದಲ್ಲಿ ಉಪಚುನಾವಣೆಗಳು ಮುಗಿದಿದ್ದು, ಸ್ಥಳೀಯ ಸಂಸ್ಥೆಗಳ ಚುನಾವಣೆ ಹೊತ್ತಿಗೆ ಪಕ್ಷಕ್ಕೆ ಹೊಸ ಅಧ್ಯಕ್ಷರನ್ನು ನೇಮಕ ಸಾಧ್ಯತೆಗಳಿವೆ ಎನ್ನಲಾಗಿದೆ.