ಫಾಕ್ಸ್ ಕಾನ್ ಕಂಪೆನಿಯಿಂದ ರಾಜ್ಯದಲ್ಲಿ 14 ಸಾವಿರ ಉದ್ಯೋಗ ಸೃಷ್ಟಿ ಭರವಸೆ
ಬೆಂಗಳೂರು, ಜು. 17: ‘ದೇವನಹಳ್ಳಿಯ ಐಟಿಐಆರ್ ವಲಯದಲ್ಲಿ ಫಾಕ್ಸ್ ಕಾನ್ ಕಂಪೆನಿಯು ಸ್ಥಾಪಿಸಲು ಉದ್ದೇಶಿಸಿರುವ ಐಫೋನ್ ತಯಾರಿಕಾ ಘಟಕಕ್ಕೆ ಪೂರಕವಾಗಿ ತುಮಕೂರಿನಲ್ಲಿ ಮತ್ತೊಂದು ಘಟಕ ಸ್ಥಾಪಿಸುವ ಪ್ರಸ್ತಾವನೆ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಕಂಪೆನಿಯ ಸಿಇಓ ಬ್ರ್ಯಾಂಡ್ ಚೆಂಗ್ ನೇತೃತ್ವದ ಎಫ್‍ಐಐ ನಿಯೋಗದ ಜೊತೆ ಉನ್ನತ ಮಟ್ಟದ ಸಭೆ ನಡೆಯಿತು.
ಸೋಮವಾರ ವಿಧಾನಸೌಧ ಮೂರನೇ ಮಹಡಿಯಲ್ಲಿನ ಸಮಿತಿ ಕೊಠಡಿಯಲ್ಲಿ ಸಭೆ ನಡೆಸಿದ ಸಂದರ್ಭದಲ್ಲಿ ಮಾತನಾಡಿದ ಸಿದ್ದರಾಮಯ್ಯ, ‘ಕರ್ನಾಟಕದಲ್ಲಿ ಕೈಗಾರಿಕಾ ಬೆಳವಣಿಗೆಗೆ ಅನುಕೂಲ ಆಗುವಂತಹ ಉತ್ತಮ ಪರಿಸರ ಇದೆ. ಶೈಕ್ಷಣಿಕ ಹಾಗೂ ಉದ್ಯಮ ವಲಯದ ನಡುವೆ ನಿರಂತರ ಸಂಪರ್ಕ ಮತ್ತು ಸಮನ್ವಯತೆ ಇದೆ. ಜೊತೆಗೆ ಕೌಶಲ್ಯಯುಕ್ತ ಸಿಬ್ಬಂದಿಯೂ ಲಭ್ಯವಿದ್ದಾರೆ ಎಂದು ವಿವರಿಸಿದರು.
ಫಾಕ್ಸ್‍ಕಾನ್ ಸಂಸ್ಥೆಯು ತನ್ನ ಉದ್ಯಮ ಸ್ಥಾಪಿಸಲು ರಾಜ್ಯ ಸರ್ಕಾರವು ಎಲ್ಲ ಅಗತ್ಯ ಸಹಕಾರ ನೀಡಲಾಗುವುದು. ಫಾಕ್ಸ್‍ಕಾನ್ ಕಂಪೆನಿಯ ಅಂಗಸಂಸ್ಥೆ ಫಾಕ್ಸ್‍ಕಾನ್ ಇಂಡಸ್ಟ್ರಿಯಲ್ ಇಂಟರ್ನೆಟ್ (ಎಫ್‍ಐಐ) ಇದಕ್ಕಾಗಿ 8,800ಕೋಟಿ ರೂ.ಹೂಡಿಕೆ ಮಾಡುವ ಯೋಜನೆ ಹೊಂದಿದೆ. ಇದು 14ಸಾವಿರ ಉದ್ಯೋಗ ಸೃಷ್ಟಿಸಲಿದ್ದು ಘಟಕ ಸ್ಥಾಪನೆಗೆ 100 ಎಕರೆ ಜಾಗ ಬೇಕಾಗುತ್ತದೆ. ತುಮಕೂರಿನ ಜಪಾನ್ ಇಂಡಸ್ಟ್ರಿಯಲ್ ಟೌನ್‍ಶಿಫ್‍ನಲ್ಲಿ ನಿಯೋಗದ ಸದಸ್ಯರು ಇಂದೇ ಲಭ್ಯ ಭೂಮಿಯನ್ನು ವೀಕ್ಷಿಸಲಿದ್ದಾರೆ ಎಂದರು.
‘ಮೊಬೈಲ್‍ಫೋನ್ ಪರದೆ, ಹೊರ ಕವಚ ಹಾಗೂ ಇತರ ಯಾಂತ್ರೀಕೃತ ಬಿಡಿಭಾಗಗಳನ್ನು ಎಫ್‍ಐಐ ಘಟಕ ತಯಾರಿಸಲಿದೆ. ದೇವನಹಳ್ಳಿ ಬಳಿಯ ಉದ್ದೇಶಿತ ಐಫೋನ್ ತಯಾರಿಕಾ ಘಟಕವು ‘ಎಂಡ್ ಅಸೆಂಬ್ಲಿ’ ಘಟಕವಾಗಿದ್ದರೆ, ಎಫ್‍ಐಐ ಘಟಕವು ಅದಕ್ಕೆ ಪೂರಕ ಘಟಕವಾಗಿರಲಿದೆ ಎಂದು ಅವರು ತಿಳಿಸಿದರು.
ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಮಾತನಾಡಿ, ‘ನಮ್ಮ ರಾಜ್ಯದಲ್ಲಿ ಫಾಕ್ಸ್‍ಕಾನ್ ಕಂಪೆನಿಯು ಸೆಮಿ ಕಂಡಕ್ಟರ್ ಸೇರಿದಂತೆ ಬೇರೆ ಯಾವುದೇ ಉದ್ದಿಮೆಯನ್ನು ಸ್ಥಾಪಿಸಲು ಬಯಸಿದರೆ ಅಗತ್ಯ ಎಲ್ಲ್ಲ ನೆರವನ್ನೂ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಎಫ್‍ಐಐ ಪ್ರಧಾನ ವ್ಯವಸ್ಥಾಪಕರಾದ ಮೈಕೇಲ್ ಲಿಂಗ್, ಜೇಸನ್ ಲಾವು, ಆಂಜಿ ಲಿನ್, ನಿರ್ದೇಶಕ ಸೆಂಥಿಲ್ ಕುಮಾರ, ಭರತ್ ದಂಡಿ, ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತೆÀ ಗುಂಜನ್ ಕೃಷ್ಣ ಉಪಸ್ಥಿತರಿದ್ದರು.