ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಸಹಭಾಗಿತ್ವ | ಬ್ರಿಟನ್‍ನ ವಿವಿಯೊಂದಿಗೆ ರಾಜ್ಯ ಸರಕಾರ ಒಡಂಬಡಿಕೆ

ಬೆಂಗಳೂರು : ಉನ್ನತ ಶಿಕ್ಷಣದಲ್ಲಿ ಹೆಚ್ಚಿನ ಸಹಭಾಗಿತ್ವ ಹೊಂದುವ ಉದ್ದೇಶದಿಂದ ರಾಜ್ಯ ಸರಕಾರ ಮತ್ತು ಬ್ರಿಟನ್‍ನ ಲಿವರ್ ಪೂಲ್ ವಿಶ್ವವಿದ್ಯಾಲಯ ಒಡಂಬಡಿಕೆಗೆ ಶುಕ್ರವಾರ ಸಹಿ ಹಾಕಿದವು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಭಾರಿ ಮತ್ತು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹಾಗೂ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ ಸಮ್ಮುಖದಲ್ಲಿ ಮುಖ್ಯಮಂತ್ರಿಯವರ ನಿವಾಸ ಕಾವೇರಿಯಲ್ಲಿ ಒಡಂಬಡಿಕೆ ಏರ್ಪಟ್ಟಿತು.
ಬ್ರಿಟಿಷ್ ಡೆಪ್ಯುಟಿ ಹೈಕಮಿಷನ್‍ನ ಬ್ರಿಟಿಷ್ ಕೌನ್ಸಿಲ್ ವಿಭಾಗದ ನಿರ್ದೇಶಕ ಜನಕ ಪುಷ್ಪನಾಥನ್, ಮಿಷನ್ ನ ಉಪ ಮುಖ್ಯಸ್ಥ ಜೇಮ್ಸ್ ಗೋಡ್ಬರ್, ಲಿವರ್ ಪೂಲ್ ವಿ.ವಿ.ಯ ಕುಲಪತಿ ಪ್ರೊ.ಟಿಮ್ ಜೋನ್ಸ್, ಮತ್ತು ಸಮ-ಕುಲಪತಿ ಪ್ರೊ.ತಾರಿಕ್ ಅಲಿ ಅಂಕಿತಕ್ಕೆ ಸಹಿ ಹಾಕಿದರು.
ಉನ್ನತ ಶಿಕ್ಷಣದಲ್ಲಿ ಆವಿಷ್ಕಾರ ಕಾರ್ಯಕ್ರಮಗಳು ಹಾಗೂ ಶಿಕ್ಷಣ ಸಹಕಾರಕ್ಕೆ ಸಂಬಂಧಿಸಿದ ಸಹಭಾಗಿತ್ವವನ್ನು ಸದೃಢಗೊಳಿಸುವ ಜೊತೆಗೆ, ಅದನ್ನು ಉನ್ನತ ಸ್ತರಕ್ಕೆ ಕೊಂಡೊಯ್ಯಲು ಜಂಟಿ ಕಾರ್ಯತಂಡ ರಚಿಸುವ ಗುರಿಯನ್ನು ಒಡಂಬಡಿಕೆ ಹೊಂದಿದೆ.
ಮುಖ್ಯಮಂತ್ರಿಯವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಲ್.ಕೆ.ಅತೀಕ್, ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಉನ್ನತ ಶಿಕ್ಷಣ ಪರಿಷತ್ ನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಕೆ.ಜಿ.ಚಂದ್ರಶೇಖರ ಸೇರಿದಂತೆ ಇತರರು ಇದ್ದರು.