ಮರಣಪೂರ್ವ ಹೇಳಿಕೆ ವಿಶ್ವಾಸಾರ್ಹತೆಯಿಂದ ಕೂಡಿರಬೇಕು: ಹೈಕೋರ್ಟ್
ಬೆಂಗಳೂರು: ಮರಣಪೂರ್ವ ಯಾವುದೇ ವ್ಯಕ್ತಿ ನೀಡುವ ಹೇಳಿಕೆಗಳು ವಿಶ್ವಾಸಾರ್ಹತೆ ಹಾಗೂ ನೈಜತೆಯಿಂದ ಕೂಡಿರಬೇಕು ಎಂದು ಹೈಕೋರ್ಟ್ ತಿಳಿಸಿದೆ.
ಗೃಹಿಣಿಯೊಬ್ಬರ ಹತ್ಯೆ ಪ್ರಕರಣದಲ್ಲಿ ತಮ್ಮನ್ನು ದೋಷಿಗಳೆಂದು ತೀರ್ಮಾನಿಸಿ, ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ನಿವಾಸಿಗಳಾದ ತಿಪ್ಪೇಸ್ವಾಮಿ ಹಾಗೂ ಅವರ ತಂದೆ-ತಾಯಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿ ಪುರಸ್ಕರಿಸಿದ ಹೈಕೋರ್ಟ್ ವಿಭಾಗೀಯ ನ್ಯಾಯಪೀಠ ಆದೇಶ ಮಾಡಿದೆ.
ಪ್ರಕರಣದಲ್ಲಿ ಕೊಲೆಗೀಡಾದ ಮಂಜಮ್ಮ ಅವರು ನೀಡಿದ್ದ ಮರಣಪೂರ್ವ ಹೇಳಿಕೆ ವಿಶ್ವಾಸಾರ್ಹತೆ ಮತ್ತು ನೈಜತೆಯಿಂದ ಕೂಡಿಲ್ಲ. ಅದು ಸಂಶಯಾಸ್ಪದವಾಗಿದೆ ಎಂದು ತೀರ್ಮಾನಿಸಿದ ನ್ಯಾಯಪೀಠ, ಮೇಲ್ಮನವಿದಾರರನ್ನು ಕೊಲೆ ಆರೋಪದಿಂದ ಖುಲಾಸೆಗೊಳಿಸಿದೆ.
ಮಂಜಮ್ಮ ಮತ್ತು ತಿಪ್ಪೇಸ್ವಾಮಿ 2010ರ ಜೂ.5ರಂದು ವಿವಾಹವಾಗಿದ್ದರು. ಮದುವೆ ವೇಳೆ ತಿಪ್ಪೇಸ್ವಾಮಿ 12 ಸಾವಿರ ರೂ. ವರದಕ್ಷಿಣೆ ಪಡೆದಿದ್ದರು. ಮದುವೆಯ ನಂತರ ಪತಿಯ ಮನೆಯಲ್ಲಿ ಮಂಜಮ್ಮ ವಾಸವಾಗಿದ್ದರು. ತಿಪ್ಪೇಸ್ವಾಮಿ, ಆತನ ತಂದೆ ನಾಗೇಂದ್ರಪ್ಪ ಹಾಗೂ ತಾಯಿ ಜಯಮ್ಮ ಹೆಚ್ಚುವರಿಯಾಗಿ 25 ಸಾವಿರ ರೂ. ವರದಕ್ಷಿಣೆ ತರುವಂತೆ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡಿದ್ದರು ಎಂದು ಆರೋಪಿಸಲಾಗಿತ್ತು.
2012ರ ಅ.14ರಂದು ಮಂಜಮ್ಮ ಜೊತೆ ಜಗಳ ತೆಗೆದ ಆರೋಪಿಗಳು ಆಕೆಯನ್ನು ಒಂದು ಕೋಣೆಗೆ ಎಳೆದುಕೊಂಡು ಹೋಗಿ ಹಲ್ಲೆ ನಡೆಸಿದ್ದರು. ಕೂಡಿ ಹಾಕಿ ಕೊಲೆ ಮಾಡಲು ಪಿತೂರಿ ನಡೆಸಿದ್ದರು. ತಿಪ್ಪೇಸ್ವಾಮಿ ಮಂಜಮ್ಮ ಮೈಮೇಲೆ ಸೀಮೆ ಎಣ್ಣೆ ಸುರಿದರೆ, ಆತನ ತಂದೆ ನಾಗೇಂದ್ರಪ್ಪ ಬೆಂಕಿ ಹಚ್ಚಿದ್ದರು.
ಈ ಇಬ್ಬರಿಗೆ ಅಪರಾಧ ಎಸಗಲು ಜಯಮ್ಮ ಅವರು ಪ್ರಚೋದನೆ ನೀಡಿದ್ದರು. ಬೆಂಕಿಯಿಂದ ಮೈ ಸುಟ್ಟು ಮಂಜಮ್ಮ ಜೋರಾಗಿ ಕಿರುಚಿಕೊಂಡಿದ್ದರು. ಆಕೆಯ ನೆರವಿಗೆ ಧಾವಿಸಿದ್ದ ನೆರೆಹೊರೆಯವರು, ಬೆಂಕಿ ನಂದಿಸಿ ಆಸ್ಪತ್ರೆಗೆ ಸೇರಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮಂಜಮ್ಮ ಮೃತಪಟ್ಟಿದ್ದರು ಎಂದು ಆರೋಪಿಗಳ ವಿರುದ್ಧ ಚಿತ್ರದುರ್ಗದ ಹಿರಿಯೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.