ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಆರೋಪ | ಅರ್ನಬ್ ಗೋಸ್ವಾಮಿ ವಿರುದ್ಧದ ಪ್ರಕರಣ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್

ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿರುವ ಆರೋಪ ಸಂಬಂಧ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಗುರುವಾರ ರದ್ದುಪಡಿಸಿ ಆದೇಶಿಸಿದೆ ಎಂದು kannada.barandbench ವರದಿ ಮಾಡಿದೆ.
ಬೆಂಗಳೂರಿನ ಎಸ್.ಜೆ.ಪಾರ್ಕ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ ರದ್ದು ಕೋರಿ ಅರ್ನಬ್ ಗೋಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ಆರಂಭವಾಗುತ್ತಿದ್ದಂತೆ ಹೆಚ್ಚುವರಿ ವಿಶೇಷ ಸರಕಾರಿ ಅಭಿಯೋಜಕ ಬಿ.ಎನ್.ಜಗದೀಶ್ ಅವರು ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೊಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ, “ಅಪರಾಧ ಏನು ಎಂಬುದು ನ್ಯಾಯಾಲಯಕ್ಕೆ ತಿಳಿಯಬೇಕಿದೆ? ಅಪರಾಧ ಏನೇನೂ ಇಲ್ಲ. ಇದು ಕಾನೂನಿನ ದುರ್ಬಳಕೆ” ಎಂದು ಅರ್ಜಿ ಪುರಸ್ಕರಿಸಲಾಗಿದ್ದು, ಪ್ರಕರಣ ರದ್ದುಪಡಿಸಲಾಗಿದೆ ಎಂದು ಹೇಳಿತು.
ಹಿಂದಿನ ವಿಚಾರಣೆಯಲ್ಲಿ ಅರ್ಜಿದಾರರ ಪರ ಹಿರಿಯ ವಕೀಲ ಅರುಣ್ ಶ್ಯಾಮ್ ಅವರು “ಕಣ್ಣು ತಪ್ಪಿನಿಂದ ಸುದ್ದಿಯನ್ನು ಪ್ರಸಾರ ಮಾಡಲಾಗಿತ್ತು. ತಕ್ಷಣ ಅದನ್ನು ಡಿಲೀಟ್ ಮಾಡಲಾಗಿದೆ. ಅರ್ನಬ್ ಗೋಸ್ವಾಮಿ ಅವರು ರಿಪಬ್ಲಿಕ್ ಕನ್ನಡ ವಾಹಿನಿಯ ಕಾರ್ಯಕಾರಿ ನಿರ್ದೇಶಕರಾಗಿದ್ದು, ಅವರ ವಿರುದ್ಧ ಐಪಿಸಿ ಸೆಕ್ಷನ್ 505 (2) ಪ್ರಕರಣ ದಾಖಲಿಸಲಾಗಿದೆ. ಇದನ್ನೂ ದೂರುದಾರರೆ ಸೂಚಿಸಿದ್ದಾರೆ” ಎಂದು ಆಕ್ಷೇಪಿಸಿದ್ದರು.
ಬೆಂಗಳೂರಿನ ಎಂಜಿ ರಸ್ತೆ ಪ್ರದೇಶದಲ್ಲಿ ಸಿದ್ದರಾಮಯ್ಯ ಅವರಿಗಾಗಿ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಆಂಬ್ಯುಲೆನ್ಸ್ ಹಾದುಹೋಗಲು ಅನುಮತಿಸಲಾಗಿಲ್ಲ ಎಂದು ಆರೋಪಿಸಿ ಮಾರ್ಚ್ 27 ರಂದು ರಿಪಬ್ಲಿಕ್ ಟಿವಿ ಕನ್ನಡದಲ್ಲಿ ಪ್ರಕಟವಾದ ವರದಿಗೆ ಸಂಬಂಧಿಸಿ ಈ ಪ್ರಕರಣವನ್ನು ದಾಖಲಿಸಲಾಗಿತ್ತು. ಆದಾಗ್ಯೂ, ಆ ಸಮಯದಲ್ಲಿ ಮುಖ್ಯಮಂತ್ರಿ ಮೈಸೂರಿನಲ್ಲಿದ್ದರು ಎಂದು ಪ್ರತಿಪಾದಿಸಿ ಕಾಂಗ್ರೆಸ್ ಸದಸ್ಯ ರವೀಂದ್ರ ಎಂಬವರು ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ಪ್ರಕರಣ ದಾಖಲಾಗಿತ್ತು.