ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿದ ಹೇಳಿಕೆ: ಶೋಭಾ ಕರಂದ್ಲಾಜೆ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಹೈಕೋರ್ಟ್
ಬೆಂಗಳೂರು: ರಾಮೇಶ್ವರಂ ಕೆಫೆ ಸ್ಫೋಟದ ಶಂಕಿತ ಆರೋಪಿಗೆ ಮತ್ತು ತಮಿಳುನಾಡಿಗೆ ಸಂಬಂಧ ಕಲ್ಪಿಸಿ ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆ ವೇಳೆ ಹೇಳಿಕೆ ನೀಡಿದ್ದ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ಗುರುವಾರ ರದ್ದುಗೊಳಿಸಿದೆ.
ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠವು ಶೋಭಾ ಕರಂದ್ಲಾಜೆ ವಿರುದ್ಧ ದಾಖಲಾಗಿದ್ದ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123(3), 123(3 ಎ) ಮತ್ತು 125 ರಡಿಯಲ್ಲಿ ಕಾಟನ್ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕ್ರಿಯೆಗಳನ್ನು ರದ್ದುಗೊಳಿಸಿದೆ.
ಶೋಭಾ ಕರಂದ್ಲಾಜೆ ಅವರ ಕ್ಷಮಾಪಣೆ ಪರಿಗಣಿಸಿ ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ಈ ಕುರಿತ ಪ್ರಕ್ರಿಯೆಯನ್ನು ರದ್ದುಗೊಳಿಸಿತ್ತು. ಇದರ ಆಧಾರದಲ್ಲಿ ಕರ್ನಾಟಕ ಹೈಕೋರ್ಟ್ ಶೋಭಾ ಕರಂದ್ಲಾಜೆ ವಿರುದ್ಧದ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ರದ್ದುಗೊಳಿಸಿದೆ.
ಬೆಂಗಳೂರಿನಲ್ಲಿ ಅಂಗಡಿ ಮಾಲಕನ ಮೇಲೆ ನಡೆದಿದ್ದ ಹಲ್ಲೆ ಖಂಡಿಸಿ ನಡೆದ ಬಿಜೆಪಿಯ ಪ್ರತಿಭಟನೆಯ ವೇಳೆ, ಶೋಭಾ ಕರಂದ್ಲಾಜೆ, ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ, ತಮಿಳುನಾಡಿನಿಂದ ಬಂದವರು ಇಲ್ಲಿ ಬಾಂಬ್ ಇಡುತ್ತಾರೆ, ದಿಲ್ಲಿಯಿಂದ ಬಂದವರು ಪಾಕಿಸ್ತಾನ್ ಝಿಂದಾಬಾದ್ ಎಂದು ಘೋಷಣೆ ಕೂಗುತ್ತಾರೆ. ಕೇರಳದಿಂದ ಬಂದವರು ಆ್ಯಸಿಡ್ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಿದ್ದರು.