ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪ | ಅರ್ನಬ್ ಗೋಸ್ವಾಮಿ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆ
ಅರ್ನಬ್ ಗೋಸ್ವಾಮಿ/ಸಿದ್ದರಾಮಯ್ಯ
ಬೆಂಗಳೂರು : ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಸುಳ್ಳು ಸುದ್ದಿ ಪ್ರಸಾರ ಮಾಡಿ ಸಾರ್ವಜನಿಕರನ್ನು ಪ್ರಚೋದಿಸಲು ಯತ್ನಿಸಿದ ಆರೋಪದಡಿ ರಿಪಬ್ಲಿಕ್ ಟಿವಿ ಮುಖ್ಯಸ್ಥ ಅರ್ನಬ್ ಗೋಸ್ವಾಮಿ ವಿರುದ್ಧ ನಗರದ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಪ್ರಕರಣದ ತನಿಖೆಗೆ ಹೈಕೋರ್ಟ್ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಪ್ರಕರಣ ರದ್ದು ಕೋರಿ ಅರ್ನಬ್ ಗೋಸ್ವಾಮಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಮಧ್ಯಂತರ ತಡೆ ನೀಡಿದೆ.
ಅರ್ಜಿದಾರ ಪರ ವಕೀಲರು ವಾದ ಮಂಡಿಸಿ, ಸುಳ್ಳು ಸುದ್ದಿ ಎಂದು ಗೊತ್ತಾದ ತಕ್ಷಣವೇ ಡಿಲೀಟ್ ಮಾಡಲಾಗಿದೆ ಎಂದು ಕೋರ್ಟ್ ಗಮನಕ್ಕೆ ತಂದ್ದರು. ಇದನ್ನು ಮಾನ್ಯ ಮಾಡಿ ಮೇಲಿನ ಆದೇಶ ನೀಡಿ, ಜ.16ಕ್ಕೆ ವಿಚಾರಣೆ ಮುಂದೂಡಿದೆ.
ಆರ್.ಕನ್ನಡ ಸುದ್ದಿವಾಹಿನಿಯು ಮಾ.27ರಂದು ಸಂಜೆ 7:15ಕ್ಕೆ ಎಂ.ಜಿ.ರಸ್ತೆಯ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಚರಿಸುವಾಗ ವಾಹನಗಳ ಸಂಚಾರ ತಡೆದು ಆ್ಯಂಬುಲೆನ್ಸ್ ಸಂಚಾರಕ್ಕೆ ಅಡ್ಡಿಪಡಿಸಿದ್ದಾರೆ ಎಂದು ವ್ಯಕ್ತಿಯೊಬ್ಬರು ಮಾಡಿದ ವಿಡಿಯೋ ತುಣುಕೊಂದನ್ನು ಪ್ರಸಾರ ಮಾಡಿದೆ. ಆದರೆ, ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿದ್ದು, ಬೆಂಗಳೂರಿನ ಕಡೆಗೆ ಪ್ರಯಾಣ ಮಾಡಿರಲಿಲ್ಲ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು ವಿಭಾಗದ ಕಾರ್ಯದರ್ಶಿ ರವೀಂದ್ರ ಎಂ.ವಿ. ನೀಡಿರುವ ಪೊಲೀಸ್ ದೂರಿನಲ್ಲಿ ಸ್ಪಷ್ಟಪಡಿಸಿದ್ದರು.
ವಿಡಿಯೋ ತುಣುಕಿನ ಅಸಲಿಯತ್ತು ಪರಿಶೀಲಿಸದೆ ಚುನಾವಣೆಯ ಸಂದರ್ಭದಲ್ಲಿ ಸಾರ್ವಜನಿಕರನ್ನು ಪ್ರಚೋದಿಸುವ ಉದ್ದೇಶದಿಂದ ಆರ್.ಕನ್ನಡ ಚಾನೆಲ್ನಲ್ಲಿ ತಪ್ಪು ಮಾಹಿತಿ ಪ್ರಸಾರ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಈ ದೂರಿನನ್ವಯ ಆರ್.ಕನ್ನಡ (ರಿಪಬ್ಲಿಕ್) ವಾಹಿನಿಯ ಮಾಲಕ ಅರ್ನಬ್ ಗೋಸ್ವಾಮಿ ಮತ್ತು ಸಂಪಾದಕ ನಿರಂಜನ್ ವಿರುದ್ಧ ಕಲಂ 505(2)ರಡಿ ಎಸ್.ಜೆ.ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.