ವಿಶೇಷ ಕ್ಷಣಕ್ಕೆ ಸಾಕ್ಷಿಯಾದ ಕರ್ನಾಟಕ ಹೈಕೋರ್ಟ್ | ಶ್ರವಣದೋಷ ಮೆಟ್ಟಿನಿಂತು ವಾದ ಮಂಡಿಸಿದ ವಕೀಲೆ ಸಾರಾ ಸನ್ನಿ
Photo : ಸಾರಾ ಸನ್ನಿ (indiatoday.in)
ಬೆಂಗಳೂರು : ರಾಜ್ಯದ ಹೈಕೋರ್ಟ್ ಇದೇ ಮೊದಲ ಬಾರಿಗೆ ಶ್ರವಣದೋಷವುಳ್ಳ ವಕೀಲೆಯೊಬ್ಬರು ಕೌಟುಂಬಿಕ ವ್ಯಾಜ್ಯ ಪ್ರಕರಣದಲ್ಲಿ ವಾದ ಮಂಡಿಸುವ ಮೂಲಕ ಇತಿಹಾಸ ಸೃಷ್ಟಿ ಮಾಡಿದ್ದಾರೆ.
ಕೌಟುಂಬಿಕ ಪ್ರಕರಣವೊಂದರಲ್ಲಿ ಪತಿಗೆ ಲುಕ್ ಔಟ್ ನೋಟಿಸ್ ಜಾರಿ ಮಾಡಿದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ವಿಚಾರಣೆ ನಡೆಸಿತು. ಈ ವೇಳೆ ಶ್ರವಣ ದೋಷವುಳ್ಳ ವಕೀಲೆ ಸಾರಾ ಸನ್ನಿ ಅವರಿಂದ ವಾದ ಆಲಿಸಿತು. ಅಲ್ಲದೆ, ನ್ಯೂನತೆಯನ್ನು ಮೀರಿ ವಾದಿಸಿದ ಸಾರಾ ಪ್ರಯತ್ನಕ್ಕೆ ಹೈಕೋರ್ಟ್ ಮೆಚ್ಚುಗೆ ವ್ಯಕ್ತಪಡಿಸಿತು.
ವಿಚಾರಣೆ ಪೂರ್ಣಗೊಂಡ ಬಳಿಕ ಹೆಚ್ಚುವರಿ ಸಾಲಿಸಿಟರ್ ಜನರಲ್ ಅರವಿಂದ್ ಕಾಮತ್, ಈ ಹಿಂದೆ ಸುಪ್ರೀಂ ಕೋರ್ಟ್ನ ಮುಖ್ಯನ್ಯಾಯಮೂರ್ತಿ ಪೀಠದ ಮುಂದೆ ಸಾರಾ ವಾದ ಮಂಡಿಸಿದ್ದರು. ಕರ್ನಾಟಕ ಹೈಕೋರ್ಟ್ ಸಾರಾಗೆ ವಾದಿಸಲು ಅವಕಾಶ ಕಲ್ಪಿಸಿಕೊಡುವ ಮೂಲಕ ಶ್ರವಣ ದೋಷವುಳ್ಳ ವಕೀಲರಿಗೆ ವಾದಿಸಲು ಅವಕಾಶ ಕಲ್ಪಿಸಿದ ದೇಶದ ಮೊದಲ ಹೈಕೋರ್ಟ್ ಎಂಬ ಕೀರ್ತಿಗೆ ಪಾತ್ರವಾಗಿದೆ ಎಂದು ತಿಳಿಸಿದರು.
ಎಲ್ಲರಿಗೂ ಧನ್ಯವಾದ ಸಲ್ಲಿಸಿದ ನ್ಯಾಯಮೂರ್ತಿ ನ್ಯಾ.ನಾಗಪ್ರಸನ್ನ ಅವರು ಪ್ರಕರಣದ ವಿಚಾರಣೆಯನ್ನು ಎಪ್ರಿಲ್ 19ಕ್ಕೆ ಮುಂದೂಡಿದರು. ಸ್ಕಾಟ್ಲೆಂಡ್ನಲ್ಲಿರುವ ಪತಿ ಮತ್ತು ಬೆಂಗಳೂರಿನಲ್ಲಿರುವ ಪತ್ನಿಯ ನಡುವಿನ ಕೌಟುಂಬಿಕ ವ್ಯಾಜ್ಯದ ಭಾಗವಾಗಿ ಪತಿಗೆ ಲುಕ್ ಔಟ್ ನೋಟಿಸ್ ಜಾರಿಗೊಳಿಸಲಾಗಿದೆ. ಇದನ್ನು ರದ್ದುಗೊಳಿಸಬೇಕು ಎಂದು ಕೋರಿ ಪತಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಕುರಿತಾದ ಪ್ರಕರಣದಲ್ಲಿ ಪತ್ನಿಯ ಪರವಾಗಿ ಸಾರಾ ಸನ್ನಿ ವಾದ ಮಂಡಿಸಿದರು.