ಪಂಚ ರಾಜ್ಯಗಳಿಗೆ ಕರ್ನಾಟಕವೇ ಎಟಿಎಂ: ವಿಪಕ್ಷ ನಾಯಕ ಆರ್.ಅಶೋಕ್
ಕಲಬುರಗಿ: ಕೇಂದ್ರ ಸರಕಾರ ಏನು ಕೊಡಬೇಕೋ ಅದನ್ನು ನೀಡುತ್ತಾ ಬಂದಿದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ರಾಜ್ಯ ಸರಕಾರ ಬ್ಯುಸಿಯಾಗಿದೆ. ರಾಜ್ಯಗಳ ಚುನಾವಣಾ ವೆಚ್ಚ ಭರಿಸುವ ನಿಟ್ಟಿನಲ್ಲಿ ಕರ್ನಾಟಕವನ್ನು ಎಟಿಎಂ ರೀತಿ ಬಳಸಿಕೊಳ್ಳಲಾಗುತ್ತಿದೆ ಎಂದು ವಿಧಾನ ಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಬರ ಅಧ್ಯಯನ ಹಿನ್ನೆಲೆ ಕಲಬುರಗಿ ಜಿಲ್ಲೆಯ ರೈತರೊಂದಿಗೆ ಮಾತನಾಡಿದ ಅವರು, ಸದ್ಯಕ್ಕಂತೂ ರಾಜ್ಯ ಸರಕಾರದ ಬಳಿ ನಯಾಪೈಸೆ ಹಣವಿಲ್ಲ. ಇದೇನಿದ್ದರೂ ಕೇವಲ ಎಟಿಎಂ ಸರಕಾರ ಎಂದು ಲೇವಡಿ ಮಾಡಿದ ಅವರು, ರೈತರಿಗೆ ಸರಿಯಾಗಿ ವಿದ್ಯುತ್ ಪೂರೈಕೆ ಮಾಡಲಿಲ್ಲ. ಪ್ರಸ್ತುತ ಬೆಳೆ ಹಾನಿಯಿಂದ ರೈತರು ಕಂಗಾಲಾಗಿದ್ದು, ಈಗ ವಿದ್ಯುತ್ ನೀಡಲು ಮುಂದಾಗಿದ್ದಾರೆ ಎಂದರು.
ಈವರೆಗೆ ಕೇಂದ್ರ ಸರಕಾರ ರಾಜ್ಯಕ್ಕೆ ಬರ ಪರಿಹಾರ ನೀಡಿಲ್ಲ ಎಂಬ ಕಾಂಗ್ರೆಸ್ ಆರೋಪಕ್ಕೆ ಉತ್ತರಿಸಿದ ಅಶೋಕ್, ನಮ್ಮ ಸರಕಾರ ಇದ್ದಾಗ ಕೇಂದ್ರದ ಹಣ ಮಂಜೂರಾತಿಗೆ ಕಾಯದೆ ನಮ್ಮ ಖಜಾನೆಯಿಂದ ಹಣ ನೀಡಲಾಗಿತ್ತು. ರಾಜ್ಯ ಸರಕಾರ ತನ್ನ ಖಜಾನೆಯಿಂದ ಹಣ ಕೊಟ್ಟರೆ ಬಳಿಕ ಅದನ್ನು ಕೇಂದ್ರ ಸರಕಾರದಿಂದ ಪಡೆಯಬಹುದು ಎಂದರು.
ಈ ಹಿಂದೆ ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ನಾಲ್ಕು ವರ್ಷ ನಾವೇ ಹಣ ಕೊಟ್ಟಿದ್ದೇವೆ. ಆದರೆ ಇವರ ಖಜಾನೆಯಲ್ಲಿ ಹಣ ಇಲ್ಲದ ಕಾರಣಕ್ಕಾಗಿ ಕೇಂದ್ರದ ಕಡೆಗೆ ಬೊಟ್ಟು ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಚುನಾವಣೆಗೂ ಮುನ್ನ ಎಲ್ಲಾ ಫ್ರೀ ಫ್ರೀ ಎಂದು ಹೇಳಿ ಈಗ ಏನೂ ನೀಡುತ್ತಿಲ್ಲ. ನಮ್ಮ ಸರಕಾರ ಅಧಿಕಾರದಲ್ಲಿದ್ದಾಗ ನಾವು ಹೇಗೆ ನಿಭಾಯಿಸಿದೆವು ಎಂಬುದಕ್ಕೆ ದಾಖಲೆಗಳೇ ಸಾಕ್ಷಿ ನುಡಿಯುತ್ತವೆ. ನಮ್ಮದೇನಾದರೂ ತಪ್ಪಿದ್ದರೆ ಅದನ್ನು ಒಪ್ಪಿಕೊಳ್ಳಲು ಸಿದ್ಧ ಎಂದರು.
ಪ್ರಧಾನಿ ಮೋದಿ ಅವರು ರೈತರಿಗೆ ಕೇಂದ್ರದಿಂದ ರೂ. 6 ಸಾವಿರ ನೀಡುತ್ತಿದ್ದರು. ಅದಕ್ಕೆ ರಾಜ್ಯದ ನಾಲ್ಕು ಸಾವಿರ ಸೇರಿಸಿ ರೂ.10 ಸಾವಿರ ನೀಡಲಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ ಅದನ್ನೂ ನಿಲ್ಲಿಸಿದೆ. ಇಷ್ಟು ಸಾಲದು ಎಂಬಂತೆ ರೈತರ ಮಕ್ಕಳ ಉನ್ನತ ಶಿಕ್ಷಣಕ್ಕಾಗಿ ನೀಡುತ್ತಿದ್ದ ಹಣವನ್ನೂ ರಾಜ್ಯ ಸರಕಾರ ನಿಲ್ಲಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.