ವಿಧಾನ ಮಂಡಲ ಅಧಿವೇಶನ: ಈ ವಾರವೂ ಗದ್ದಲ, ಕೋಲಾಹಲ?
ಮುಡಾ ಅಕ್ರಮ, ಗ್ಯಾರಂಟಿಗಳಿಗೆ ಎಸ್ಸಿಎಸ್ಪಿ-ಟಿಎಸ್ಪಿ ಹಣ ಬಳಕೆ ಚರ್ಚೆ ಸಾಧ್ಯತೆ
ಬೆಂಗಳೂರು: ವಿಧಾನ ಮಂಡಲದ ಮುಂಗಾರು ಅಧಿವೇಶನದ ಮೊದಲ ವಾರವು ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಬಹುಕೋಟಿ ರೂ.ಹಗರಣದ ಚರ್ಚೆ, ಗದ್ದಲ, ಧರಣಿಗಷ್ಟೇ ಸೀಮಿತವಾಗಿತ್ತು. ಈ ನಡುವೆ ಉತ್ತರ ಕನ್ನಡ ಜಿಲ್ಲೆಯ ಶಿರೂರು ಬಳಿ ಗುಡ್ಡ ಕುಸಿತದಿಂದ ಆದ ದುರಂತದ ವಿಚಾರ ಹೊರತುಪಡಿಸಿ, ಬೇರೆ ಯಾವುದೆ ಸಾರ್ವಜನಿಕ ಮಹತ್ವದ ವಿಚಾರಗಳ ಚರ್ಚೆಗೆ ಅವಕಾಶವೇ ಇಲ್ಲದಂತಾಗಿತ್ತು.
ಇದೀಗ ಸೋಮವಾರ(ಜು.22)ದಿಂದ ಪುನಃ ಸದನ ಸಮಾವೇಶಗೊಳ್ಳುತ್ತಿದ್ದು, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪತ್ನಿ ಪಾವರ್ತಿಯವರಿಗೆ ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಪಕ್ಷಗಳು ನಿಲುವಳಿ ಸೂಚನೆಯಡಿ ಚರ್ಚೆಗೆ ಅವಕಾಶ ಕೋರಲಿದ್ದಾರೆ.
ಈಗಾಗಲೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟು ಹಿಡಿದಿರುವ ಪ್ರತಿಪಕ್ಷಗಳು, ಮುಡಾ ವಿಚಾರವು ನೇರವಾಗಿ ಮುಖ್ಯಮಂತ್ರಿಯ ಕುಟುಂಬಕ್ಕೆ ಸಂಬಂಧಪಟ್ಟಿರುವುದರಿಂದ ಸದನದಲ್ಲಿ ಸರಕಾರ ಹಾಗೂ ಮುಖ್ಯಮಂತ್ರಿಯನ್ನು ಇಕ್ಕಟ್ಟಿಗೆ ಸಿಲುಕಿಸಲು ರಣತಂತ್ರಗಳನ್ನು ರೂಪಿಸುತ್ತಿವೆ.
ಮುಡಾ ವಿಚಾರದಲ್ಲಿ ಮುಖ್ಯಮಂತ್ರಿ ಜೊತೆಗೆ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ರಾಜೀನಾಮೆಗೂ ಪ್ರತಿಪಕ್ಷಗಳು ಆಗ್ರಹಿಸಲಿವೆ. ನಗರಾಭಿವೃದ್ಧಿ ಇಲಾಖೆಯು ನಿಯಮಾವಳಿಗಳನ್ನೆಲ್ಲ ಗಾಳಿಗೆ ತೂರಿ ಅಕ್ರಮವಾಗಿ ಮುಖ್ಯಮಂತ್ರಿಯ ಪತ್ನಿಯ ಹೆಸರಿನಲ್ಲಿ ಅಕ್ರಮವಾಗಿ ನಿವೇಶಗಳನ್ನು ಮಂಜೂರು ಮಾಡಿದೆ ಎಂದು ಪ್ರತಿಪಕ್ಷಗಳು ಆರೋಪಿಸಿವೆ.
ಮುಡಾ ಅಕ್ರಮಕ್ಕೆ ಸಂಬಂಧಿಸಿದಂತೆ ಈಗಾಗಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ವಿಪಕ್ಷ ನಾಯಕ ಆರ್.ಅಶೋಕ್ ದಾಖಲೆಗಳನ್ನು ಬಿಡುಗಡೆ ಮಾಡಿ ಮುಖ್ಯಮಂತ್ರಿಯ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಅಲ್ಲದೆ, ನಿನ್ನೆ ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ದೂರು ಸಲ್ಲಿಸಿದ್ದಾರೆ.
ಮುಡಾ ವಿಚಾರವನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಸದನದಲ್ಲಿ ಕೋಲಾಹಲ ಎಬ್ಬಿಸಲಿದ್ದಾರೆ ಎಂಬುದನ್ನು ಅರಿತು ಮುಜುಗರವನ್ನು ತಪ್ಪಿಸಿಕೊಳ್ಳಲು ಈಗಾಗಲೆ ಸರಕಾರವು ಹೈಕೋರ್ಟ್‍ನ ನಿವೃತ್ತ ನ್ಯಾಯಾಧೀಶ ಪಿ.ಎನ್.ದೇಸಾಯಿ ನೇತೃತ್ವದಲ್ಲಿ ಏಕ ಸದಸ್ಯ ವಿಚಾರಣಾ ಆಯೋಗ ರಚನೆ ಮಾಡಿ, ತನಿಖೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆ ಆದೇಶ ಹೊರಡಿಸಿದೆ.
ಜೊತೆಗೆ, ಬಿಜೆಪಿ ಸರಕಾರದ ಅವಧಿಯಲ್ಲಿ ನಡೆದಿದೆ ಎನ್ನಲಾದ ಹಗರಣಗಳನ್ನು ಪಟ್ಟಿ ಮಾಡಿರುವ ಕಾಂಗ್ರೆಸ್ ಸರಕಾರವು, ಸದನದಲ್ಲಿ ಪ್ರತಿಪಕ್ಷಗಳನ್ನು ಕಟ್ಟಿ ಹಾಕಲು ಯತ್ನಿಸಲಿದೆ. ವಿಪಕ್ಷಗಳು ಸದನದಲ್ಲಿ ಸರಕಾರದ ವಿರುದ್ಧ ಮುಗಿಬಿದ್ದಾಗ ಎಲ್ಲ ಶಾಸಕರು ಒಗ್ಗಟ್ಟಾಗಿ ಅವರನ್ನು ಎದುರಿಸಬೇಕು ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಕಲ್ಯಾಣಕ್ಕೆ ಬಳಸಬೇಕಿರುವ ಎಸ್ಸಿಎಸ್ಪಿ-ಟಿಎಸ್ಪಿ ಹಣವನ್ನು ರಾಜ್ಯ ಸರಕಾರ ಪಂಚ ಗ್ಯಾರಂಟಿಗಳಿಗೆ ಬಳಕೆ ಮಾಡಿಕೊಳ್ಳಲು ಅವಕಾಶ ಕೊಟ್ಟಿರುವುದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ. ಸದನದಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಸರಕಾರದ ವಿರುದ್ಧ ಹೋರಾಟ ಮಾಡಲು ಪ್ರತಿಪಕ್ಷಗಳು ಸಜ್ಜಾಗಿವೆ.
ತಮಿಳುನಾಡು ವಿಧಾನಸಭೆಯಲ್ಲಿ ನೀಟ್ ಪರೀಕ್ಷೆಯ ವಿರುದ್ಧ ಸರ್ವಾನುಮತದ ನಿರ್ಣಯ ಕೈಗೊಂಡಿರುವ ಬೆನ್ನಲ್ಲೆ ನಮ್ಮ ರಾಜ್ಯದಲ್ಲಿಯೂ ನೀಟ್ ಪರೀಕ್ಷೆಯ ವಿರುದ್ಧ ನಿರ್ಣಯ ಮಂಡಿಸಿ ಅಂಗೀಕರಿಸಲು ಸರಕಾರ ಚಿಂತನೆ ನಡೆಸಿದೆ. ಇದರ ಜೊತೆಗೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಮಾಡುವ ಸಂಬಂಧ ವಿಧೇಯಕ ಮಂಡನೆಯಾಗುವ ಸಾಧ್ಯತೆಯಿದೆ.
ಪ್ರತಿಪಕ್ಷಗಳನ್ನು ಕಟ್ಟಿ ಹಾಕಲು ಬಿಜೆಪಿ ಹಾಗೂ ಜೆಡಿಎಸ್ ಅವಧಿಯಲ್ಲಿ ಮುಡಾದಲ್ಲಿ ನಡೆದಿರಬಹುದಾದ ಅಕ್ರಮಗಳ ಕುರಿತು ತನಿಖೆಗೆ ಆದೇಶಿಸಬಹುದು. ಅಲ್ಲದೆ, ದೇವರಾಜ ಅರಸು ಟ್ರಕ್ ಟರ್ಮಿನಲ್, ಭೋವಿ ಅಭಿವೃದ್ಧಿ ನಿಗಮ, ಪರಶುರಾಮ ಥೀಮ್ ಪಾರ್ಕ್, ಎಪಿಎಂಸಿ ಆವರ್ತ ನಿಧಿಯಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳು, ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧದ ಲೈಂಗಿಕ ಹಗರಣದ ಆರೋಪಗಳನ್ನು ಕಾಂಗ್ರೆಸ್ ಪಕ್ಷವು ಪ್ರಸ್ತಾಪಿಸುವ ಸಾಧ್ಯತೆಗಳಿವೆ.