ಸ್ಪೀಕರ್ ಜೊತೆ ಜಟಾಪಟಿ: ಸದನದಿಂದ ಅರ್ಧದಲ್ಲೇ ಎದ್ದು ಹೋದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ
ಬೆಳಗಾವಿ, ಡಿ. 5: ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಹಿರಿಯ ಸದಸ್ಯ ಬಸವರಾಜ ರಾಯರೆಡ್ಡಿ ಅವರ ಸಲಹೆಗೆ ಸ್ಪೀಕರ್ ಯು.ಟಿ.ಖಾದರ್ ಸ್ವೀಕರಿಸದ ಹಿನ್ನೆಲೆಯಲ್ಲಿ ತೀವ್ರ ಮುಜುಗರಕ್ಕೆ ಸಿಲುಕಿದ ರಾಯರೆಡ್ಡಿ ಸಭಾತ್ಯಾಗ ಮಾಡಿದ ಪ್ರಸಂಗಕ್ಕೆ ವಿಧಾನಸಭೆ ಸಾಕ್ಷಿಯಾಯಿತು.
ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಎದ್ದು ನಿಂತ ರಾಯರೆಡ್ಡಿ, ಸ್ಪೀಕರ್ ಅವರೇ ನಿಯಮ ಪಾಲಿಸಬೇಕು. ಪ್ರಶ್ನೋತ್ತರ ಅವಧಿ ಬಹಳ ದೀರ್ಘಕಾಲ ಆಗುತ್ತಿದೆ ಎಂದಿದ್ದಕ್ಕೆ, ಸ್ಪೀಕರ್, 'ನೀವು ಮಧ್ಯಾಹ್ನ 12 ಕ್ಕೆ ಕಲಾಪಕ್ಕೆ ಬಂದು ನಮಗೆ ಬುದ್ಧಿವಾದ ಹೇಳಬೇಡಿ ಎಂದು ಹೇಳಿದರು.
ಈ ವೇಳೆ ಕೆರಳಿದ ರಾಯರೆಡ್ಡಿ, ನಾನು ಹಿರಿಯ ಸದಸ್ಯ. ನೀವು ಹೀಗೆ ಹೇಳುವುದು ಸರಿಯಲ್ಲ ಎಂದು ಆಕ್ಷೇಪಿಸಿದರು. ಸಮಯ ಪಾಲನೆ ಮಾಡಬೇಕು. ಬೇರೆ ವಿಷಯಗಳ ಚರ್ಚೆ ಅವಕಾಶ ಸಿಗುವುದಿಲ್ಲ ಎಂದು ಹೇಳಿದರು. ಈಗ ನೀವು ಕುಳಿತುಕೊಳ್ಳಿ ಎಂದು ಸ್ಪೀಕರ್ ಹೇಳಿದ್ದರಿಂದ ಸಿಟ್ಟಿಗೆದ್ದ ಆಡಳಿತ ಪಕ್ಷದ ರಾಯರೆಡ್ಡಿ ಸದನದಿಂದ ಹೊರನೆಡೆದರು.
ತಾಳ್ಮೆಯಿಂದ ಇರಿ ಎಂದು ಸ್ಪೀಕರ್ ಮನವಿಗೂ ಕಿವಿಗೂಡದೆ ರಾಯರೆಡ್ಡಿ ಸಭಾತ್ಯಾಗ ಮಾಡುವೆ ಎಂದು ಹೊರಗೆ ಹೊರಟರು. ಆಗ ಬಿಜೆಪಿ ಸದಸ್ಯ ಯತ್ನಾಳ್, ಹಿರಿಯ ಸದಸ್ಯ ರಾಯರೆಡ್ಡಿ ಅವರನ್ನು ಒಳಗೆ ಬರಲು ಹೇಳಿ ಎಂದರು. ಸ್ಪೀಕರ್ ಖಾದರ್ ಇದ್ಯಾವುದನ್ನು ಕಿವಿಗೆ ಹಾಕಿಕೊಳ್ಳದೆ, ಪ್ರಶ್ನೋತ್ತರ ವಿಷಯ ಚರ್ಚೆ ಮುಂದುವರಿಸಿದರು.
ಸಚಿವ ಸಂಪುಟದಲ್ಲಿ ಸ್ಥಾನ ಸಿಗದಿದ್ದರಿಂದ ಮೊದಲೇ ಅಸಮಾಧಾನಗೊಂಡಿದ್ದ ರಾಯರೆಡ್ಡಿ ಅವರು ನಿಗಮ ಮಂಡಳಿಯಲ್ಲೂ ತನಗೆ ಸ್ಥಾನ ಬೇಡ ಎಂದು ಹೇಳಿದ್ದರು. ಅದಾಗಿ, ನಿನ್ನೆ ಸದನ ಒಂದು ಗಂಟೆ ತಡವಾಗಿ ನಡೆದಿದೆ ಎಂಬ ಕಾರಣಕ್ಕೂ ಅವರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದರು.