ಕವಾಡಿಗರಹಟ್ಟಿ ಕಲುಷಿತ ನೀರು ಸೇವನೆ ಪ್ರಕರಣ: ನೀರು ಸರಬರಾಜು ಸಹಾಯಕ ಅಮಾನತು, ಇಬ್ಬರು ಹೊರಗುತ್ತಿಗೆ ನೌಕರರ ವಜಾ
ಇಬ್ಬರು ಇಂಜಿನಿಯರ್ ಗಳ ಅಮಾನತಿಗೆ ಜಿಲ್ಲಾಧಿಕಾರಿ ಶಿಫಾರಸು
ಚಿತ್ರದುರ್ಗ, ಆ.3: ಕವಾಡಿಗರಹಟ್ಟಿ ಗ್ರಾಮದಲ್ಲಿ ಕಲುಷಿತ ನೀರಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬರು ನೀರು ಸರಬರಾಜು ಸಹಾಯಕರನ್ನು ಅಮಾನತುಗೊಳಿಸಲಾಗಿದ್ದು, ಇಬ್ಬರು ಹೊರಗುತ್ತಿಗೆ ನೌಕರರನ್ನು ಸೇವೆಯಿಂದ ವಜಾಗೊಳಿಸಿ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಕರ್ತವ್ಯ ಲೋಪ ಎಸಗಿದ ಆರೋಪದಲ್ಲಿ ಇಬ್ಬರು ಇಂಜಿನಿಯರ್ ಗಳನ್ನು ಅಮಾನತುಗೊಳಿಸಲು ಶಿಫಾರಸು ಮಾಡಿದ್ದಾರೆ.
ನಗರದ ಎಲ್ಲ ಕುಡಿಯುವ ನೀರಿನ ಸಂಗ್ರಹ ತೊಟ್ಟಿಗಳನ್ನು ಸ್ವಚ್ಛಗೊಳಿಸಿ, ನೀರಿನ ಸೋರಿಕೆ ದುರಸ್ತಿಗೊಳಿಸಿ, ಕ್ಲೋರಿನೇಷನ್ ಮಾಡುವಂತೆ ಹಲವು ಬಾರಿ ತಿಳಿಸಲಾಗಿದ್ದರೂ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ ಆರ್.ಗಿರಡ್ಡಿ ಹಾಗೂ ಕಿರಿಯ ಇಂಜಿನಿಯರ್ ಎಸ್.ಆರ್. ಕಿರಣ್ ಕುಮಾರ್ ಅವರು ಸೂಚನೆಯನ್ವಯ ಕಾರ್ಯ ನಿರ್ವಹಿಸಿಲ್ಲ. ಈ ಹಿನ್ನೆಲೆಯಲ್ಲಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲು ಜಿಲ್ಲಾಧಿಕಾರಿ ದಿವ್ಯಾಪ್ರಭು ಅವರು ನಗರಾಭಿವೃದ್ಧಿ ಇಲಾಖೆಗೆ ಶಿಫಾರಸು ಮಾಡಿದ್ದಾರೆ.
ಕವಾಡಿಗರಹಟ್ಟಿ ಪ್ರದೇಶಕ್ಕೆ ಓವರ್ ಹೆಡ್ ಟ್ಯಾಂಕ್ ಮೂಲಕ ನೀರು ಹಂಚಿಕೆಯ ಹೊಣೆ ನಿಭಾಯಿಸುತ್ತಿದ್ದ ನಗರಸಭೆಯ ನೀರು ಸರಬರಾಜು ಸಹಾಯಕ ಸಿ.ಎಚ್.ಪ್ರಕಾಶ ಎಂಬವರನ್ನು ಸೇವೆಯಿಂದ ಅಮಾನತುಗೊಳಿಸಿದ್ದಾರೆ. ಹೊರಗುತ್ತಿಗೆ ಆಧಾರದ ಮೇರೆಗೆ ನೇಮಕಗೊಂಡಿದ್ದ ಕವಾಡಿಗರಹಟ್ಟಿಯ ಇಬ್ಬರು ಹೊರಗುತ್ತಿಗೆ ನೌಕರರನ್ನು ಕೆಲಸದಿಂದ ವಜಾಗೊಳಿಸಿದ್ದಾರೆ. ಕರ್ತವ್ಯದಲ್ಲಿ ನಿರ್ಲಕ್ಷ ತೋರಿದ ಆರೋಪದಲ್ಲಿ ಪೌರಾಯುಕ್ತ ಶ್ರೀನಿವಾಸ್ ಅವರಿಗೆ ಜಿಲ್ಲಾಧಿಕಾರಿ ನೋಟಿಸ್ ಜಾರಿಗೊಳಿಸಿದ್ದಾರೆ.