ಕಾವೇರಿ ಈ ನಾಡಿಗೆ ಬರೀ ನೀರಲ್ಲ, ಈ ಮಣ್ಣಿನ ಆಳಕ್ಕಿಳಿದ ಜಲರೂಪದ ಬೇರು: ನಟ ದುನಿಯಾ ವಿಜಯ್
ಬೆಂಗಳೂರು: ಕರ್ನಾಟಕ –ತಮಿಳುನಾಡು ನಡುವಿನ ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿ ನಟ ದುನಿಯಾ ವಿಜಯ್ ಪ್ರತಿಕ್ರಿಯಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ನಲ್ಲಿ ಪ್ರತಿಕ್ರಿಯಿಸಿರುವ ಅವರು, ʼʼಕಾವೇರಿ ಈ ನಾಡಿಗೆ ಬರೀ ನೀರಲ್ಲ ಈ ಮಣ್ಣಿನ ಆಳಕ್ಕಿಳಿದ ಜಲರೂಪದ ಬೇರು , ಪ್ರತಿಯೊಬ್ಬ ಕನ್ನಡಿಗನೂ ತಲೆಮೇಲೆ ಹೊತ್ತು ತಿರುಗೋ ದೈವರೂಪದ ತೇರು . ಇಷ್ಟು ದಿನ ಆಕಾಶಕ್ಕೆ ಮುಖ ಮಾಡಿ ನಿಂತಿದ್ದ ಅನ್ನದಾತ ಇಂದು ನ್ಯಾಯಾಲಯದ ಕಡೆ ಮುಖ ಮಾಡಿ ನಿಂತಿದ್ದಾನೆ . ಕಣ್ಣ ಮುಂದೆ ನೀರು ಹರಿದಂತೆ ಅವನ ಕಣ್ಣಿನಿಂದ ನೀರು ಹರಿಯುತ್ತದೆʼʼ ಎಂದು ಬೆರದುಕೊಂಡಿದ್ದಾರೆ.
ʼʼನ್ಯಾಯಕ್ಕಾಗಿ ಕೈಚಾಚುತ್ತಿಲ್ಲ, ಒಕ್ಕೊರಲಿನಿಂದ ಕೈಮುಗಿಯುತ್ತಿದ್ದೇವೆ ದಯಮಾಡಿ ಅನ್ನದಾತನಿಗೆ ನ್ಯಾಯ ಒದಗಿಸಿʼʼ ಎಂದು ವಿಜಯ್ ಟ್ವೀಟ್ ಮಾಡಿದ್ದಾರೆ.
ಮಧ್ಯ ಪ್ರವೇಶಿಸಲು ಸುಪ್ರೀಂಕೋರ್ಟ್ ನಕಾರ
ತಮಿಳುನಾಡಿಗೆ 5, 000 ಕ್ಯೂಸೆಕ್ಸ್ ಕಾವೇರಿ ನದಿ ನೀರು ಬಿಡುಗಡೆ ಮಾಡುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಎಡಬ್ಲ್ಯು ಎಂಎ) ನೀಡಿರುವ ಆದೇಶದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಪ್ರತಿ 15 ದಿನಗಳಿಗೊಮ್ಮೆ ಸಭೆ ನಡೆಸಲು ಸುಪ್ರೀಂಕೋರ್ಟ್ ಪ್ರಾಧಿಕಾರಕ್ಕೆ ಆದೇಶಿಸಿದೆ.