ಕಾವೇರಿ ನದಿ ನೀರು ಪ್ರಾಧಿಕಾರ ಕರ್ನಾಟಕದ ಮೇಲೆ ದ್ವೇಷ ಸಾಧಿಸುತ್ತಿರುವಂತೆ ಅನಿಸುತ್ತಿದೆ: ಸಚಿವ ಕೆ.ವೆಂಕಟೇಶ್
ಚಾಮರಾಜನಗರ: ಕಾವೇರಿ ನದಿ ನೀರು ಪ್ರಾಧಿಕಾರ ಕರ್ನಾಟಕ ರಾಜ್ಯದ ಮೇಲೆ ದ್ವೇಷ ಸಾಧಿಸುವಂತೆ ಆದೇಶವನ್ನು ಹೊರಡಿಸುತ್ತಿರುವಂತೆ ಅನಿಸುತ್ತಿದೆ ಎಂದು ಪಶು ಸಂಗೋಪನಾ ಸಚಿವ ಹಾಗೂ ಚಾಮರಾಜನಗರ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಹೇಳಿದ್ದಾರೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ಖುದ್ದಾಗಿ ಭೇಟಿ ನೀಡಿ ಗುಡ್ಡಗಾಡಿನ ಜನರ ಸಂಕಷ್ಟದ ಬಗ್ಗೆ ಮಾಹಿತಿ ಪಡೆದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾಗಿದೆ, ಜಲಾಶಯದಲ್ಲಿ ನೀರು ಸಂಗ್ರಹ ಮಟ್ಟ ಕುಸಿದಿದೆ, ರಾಜ್ಯದ ರೈತರು ಮತ್ತು ಸಾರ್ವಜನಿಕರಿಗೆ ನೀರು ಪೂರೈಕೆ ಮಾಡಲು ಸಾಧ್ಯವಾಗದ ಸ್ಥಿತಿಗೆ ಬಂದಿರುವಾಗ ಮತ್ತೆ ತಮಿಳುನಾಡಿಗೆ ನೀರು ಹರಿಸಲು ಆದೇಶ ಮಾಡಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ಹೇಳುವ ಮೂಲಕ ಕಾವೇರಿ ನದಿ ನೀರು ಹಂಚಿಕೆ ಪ್ರಾಧಿಕಾರ ಹೊರಡಿಸಿದ ಆದೇಶದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.
ಮಲೆ ಮಹದೇಶ್ವರ ಬೆಟ್ಟದ ಆಸು ಪಾಸಿನಲ್ಲಿರುವ ಚಂಗಡಿ ಗ್ರಾಮವನ್ನು ಸ್ಥಳಾಂತರ ಮಾಡುವ ಬಗ್ಗೆ ಸರ್ಕಾರದಿಂದ ಸೂಕ್ತ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದರು.
ರಾಜ್ಯದಲ್ಲಿ ದಲಿತ ಹಾಗೂ ಪರಿಶಿಷ್ಟ ವರ್ಗದವರಿಗೆ ಸಿ.ಎಂ. ಪಟ್ಟ ನೀಡಬೇಕೆಂಬ ಕೂಗಿಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಸಚಿವ ಕೆ. ವೆಂಕಟೇಶ್, ಯಾರಿಗೆ, ಯಾವ ವರ್ಗಕ್ಕೆ, ಯಾವಾಗ ಅವಕಾಶ ಸಿಗುತ್ತೋ ಆಗ ಆಗುತ್ತೆ ಎನ್ನುವ ಮೂಲಕ ಚರ್ಚೆಗೆ ತೆರೆ ಎಳೆದು ತೆರಳಿದರು.
ಈ ವೇಳೆ ಜಿಲ್ಲಾಧಿಕಾರಿ ಶಿಲ್ಪನಾಗ್, ಹನೂರು ಕ್ಷೇತ್ರದ ಶಾಸಕ ಎಂ.ಆರ್. ಮಂಜುನಾಥ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಧಿಕಾರಿ ಮಂಜುಳ ಹಾಜರಿದ್ದರು.