ಹೆಚ್ಚುವರಿ ಡಿಸಿಎಂ ಕುರಿತು ಹೇಳಿಕೆ ನೀಡದಂತೆ ಕಾಂಗ್ರೆಸ್ ನಾಯಕರಿಗೆ ಕೆ.ಸಿ. ವೇಣುಗೋಪಾಲ್ ಸೂಚನೆ
photo-pti
ಹೊಸದಿಲ್ಲಿ: ಹೆಚ್ಚುವರಿ ಉಪಮುಖ್ಯಮಂತ್ರಿಗಳ ಕುರಿತಂತೆ ಕಾಂಗ್ರೆಸ್ ನಾಯಕರು ಹೇಳಿಕೆಗಳನ್ನು ನೀಡದಂತೆ ಕಾಂಗ್ರೆಸ್ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ಸೂಚನೆ ನೀಡಿದ್ದಾರೆ.
ʼʼಮಹಿಳೆಯರು, ಬಡವರು ಮತ್ತು ಸಾಮಾನ್ಯ ಜನರಿಗೆ ನೀಡಿದ್ದ ಭರವಸೆಗಳನ್ನು ಅನುಷ್ಠಾನಗೊಳಿಸಿರುವ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ಬಗ್ಗೆ ಇಡೀ ದೇಶವೇ ಮಾತನಾಡುತ್ತಿದೆ. ಕರ್ನಾಟಕ ಮಾದರಿಯ ಯಶಸ್ಸಿಗೆ ಬಿಜೆಪಿ ಹಾಗೂ ಇತರ ಪ್ರಾದೇಶಿಕ ಪಕ್ಷಗಳನ್ನು ತಲ್ಲಣಿಸಿದೆ. ಇದರಿಂದಾಗಿ, ಮಾಧ್ಯಮದ ಒಂದು ವಿಭಾಗವನ್ನು ಬಳಸಿ ಮುಖ್ಯಮಂತ್ರಿ ಹುದ್ದೆ ಮತ್ತು ಉಪಮುಖ್ಯಮಂತ್ರಿಗಳ ಸಂಖ್ಯೆಗೆ ಸಂಬಂಧಿಸಿದಂತೆ ಸಂಪೂರ್ಣವಾಗಿ ಅನಗತ್ಯವಾದ ವದಂತಿಗಳನ್ನು ಹಬ್ಬಿಸುತ್ತಿದ್ದಾರೆ. ಕೆಲವು ಕಾಂಗ್ರೆಸ್ ನಾಯಕರು ಮತ್ತು ಮಂತ್ರಿಗಳು ಈ ವದಂತಿಗಳ ಬಗ್ಗೆ ಪ್ರತಿಕ್ರಿಯಿಸುತ್ತಿರುವುದು ಕಳವಳಕಾರಿಯಾಗಿದೆʼʼ ಎಂದು ವೇಣುಗೋಪಾಲ್ ಹೇಳಿದ್ದಾರೆ.
ʼʼಕಲ್ಯಾಣ ಸರ್ಕಾರದ ‘ಕರ್ನಾಟಕ ಮಾದರಿ’ಗೆ ಪಕ್ಷದೊಳಗೆ ಸಂಪೂರ್ಣ ಒಗ್ಗಟ್ಟು ಮತ್ತು ಏಕತೆ ಅಗತ್ಯವಿದೆ. ಕಾಂಗ್ರೆಸ್ ನಾಯಕರು ಸಾರ್ವಜನಿಕವಾಗಿ ಮಾಡುವ ವಿಭಜನೆ ಅಥವಾ ಗೊಂದಲಮಯ ಹೇಳಿಕೆಗಳು ನಮ್ಮ ಪಕ್ಷದ ಶಿಸ್ತು ಮತ್ತು ಒಗ್ಗಟ್ಟಿನ ಮೇಲೆ ಪರಿಣಾಮ ಬೀರುತ್ತವೆ, ಹಾಗಾಗಿ, ಪಕ್ಷ ಮತ್ತು ಸರ್ಕಾರಕ್ಕೆ ಸಂಬಂಧಿಸಿದ ವಿಷಯಗಳನ್ನು ಸಾರ್ವಜನಿಕವಾಗಿ ಪ್ರಸ್ತಾಪಿಸದೆ, ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸಬೇಕೆಂದು ನಾನು ಎಲ್ಲಾ ಪಕ್ಷದ ನಾಯಕರಲ್ಲಿ ಕೋರುತ್ತೇನೆ ʼʼ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.