ವಿವಿಧ ನಿಗಮ ಮಂಡಳಿಗಳಿಗೆ KEA ಪರೀಕ್ಷೆ: ಮಂಗಳಸೂತ್ರ, ಕಾಲುಂಗುರಕ್ಕೆ ಮಾತ್ರ ವಿನಾಯಿತಿ
ಸಾಂದರ್ಭಿಕ ಚಿತ್ರ
ಬೆಂಗಳೂರು, ನ.13: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವಿವಿಧ ನಿಗಮ ಮಂಡಳಿಗಳಿಗೆ ನ.18 ಮತ್ತು ನ.19ರಂದು ನೇರ ನೇಮಕಾತಿ ಪರೀಕ್ಷೆ ನಡೆಸುತ್ತಿದ್ದು, ಅಭ್ಯರ್ಥಿಗಳು ವಸ್ತ್ರಸಂಹಿತೆಯನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್ ರಮ್ಯಾ ತಿಳಿಸಿದ್ದಾರೆ.
ಸೋಮವಾರ ಪ್ರಕಟನೆ ಹೊರಡಿಸಿರುವ ಅವರು, ಪರೀಕ್ಷೆಯ ದಿನದಂದು ತುಂಬುತೋಳಿನ ಶರ್ಟ್ ಧರಿಸುವಂತಿಲ್ಲ. ಅಭ್ಯರ್ಥಿಗಳಿಗೆ ಜೇಜು ಇಲ್ಲದ ಅಥವಾ ಕಡಿಮೆ ಜೇಬಿರುವ ಪ್ಯಾಂಟ್ ಧರಿಸಿ ಪರೀಕ್ಷೆಗೆ ಹಾಜರಾಗಲು ಸೂಚಿಸಲಾಗಿದೆ. ಕುರ್ತಾ ಪೈಜಾಮ, ಜೀನ್ಸ್ ಪ್ಯಾಂಟ್ ಧರಿಸಿ ಪರೀಕ್ಷೆಗೆ ಹಾಜರಾಗಲು ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಧರಿಸುವ ಬಟ್ಟೆಗಳು ಹಗುರವಾಗಿದ್ದು ದೊಡ್ಡ ಎಂಬ್ರಾಯಿಡರಿ, ಜಿಪ್ ಪಾಕೆಟ್ಗಳು, ದೊಡ್ಡ ಬಟನ್ಗಳು- ಇವುಗಳನ್ನು ಹೊಂದಿರಬಾರದು ಎಂದು ತಿಳಿಸಲಾಗಿದೆ. ಅಭ್ಯರ್ಥಿಗಳು ಶೂ ಹಾಕಿಕೊಂಡು ಪರೀಕ್ಷೆಗೆ ಹಾಜರಾಗುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ತೆಳುವಾದ ಅಡಿಭಾಗ ಇರುವ ಚಪ್ಪಲಿಗಳನ್ನು ಧರಿಸುವುದು ಸೂಕ್ತ ಎಂದು ಹೇಳಿದ್ದಾರೆ.
ಮಹಿಳಾ ಅಭ್ಯರ್ಥಿಗಳಿಗೆ ಮಂಗಳಸೂತ್ರ ಮತ್ತು ಕಾಲುಂಗುರ ಹೊರತುಪಡಿಸಿ ಯಾವುದೇ ಅಭ್ಯರ್ಥಿಯು ಕುತ್ತಿಗೆಯ ಸುತ್ತ ಲೋಹದ ಆಭರಣ ಧರಿಸುವುದು, ಅಥವಾ ಕಿವಿಯೋಲೆ, ಉಂಗುರ, ಕಡಗ ಧರಿಸುವುದನ್ನು ನಿರ್ಬಂಧಿಸಲಾಗಿದೆ. ಬ್ಲೂಟೂತ್ ಸಾಧನ ಬಳಕೆಗೆ ಆಸ್ಪದವಾಗಬಾರದೆಂದು ತಲೆಯ ಮೇಲೆ ಟೋಪಿ ಅಥವಾ ಯಾವುದೇ ವಸ್ತ್ರ ಧರಿಸುವುದನ್ನು, ಅಂತಯೇ, ಬಾಯಿ, ಕಿವಿ ಹಾಗೂ ತಲೆ ಮುಚ್ಚುವ ರೀತಿಯಲ್ಲಿ ಯಾವುದೇ ವಸ್ತ್ರ, ಸಾಧನ ಧರಿಸುವುದನ್ನು ನಿಷೇಧಿಸಲಾಗಿದೆ ಎಂದು ವಿವರಿಸಿದ್ದಾರೆ.
ಯಾವುದೇ ರೀತಿಯ ಮಾಸ್ಕ್ ಧರಿಸುವಂತಿಲ್ಲ. ಎಲೆಕ್ಟ್ರಾನಿಕ್ ವಸ್ತುಗಳು, ಮೊಬೈಲ್ ಫೋನ್, ಪೆನ್ ಡ್ರೈವ್, ಇಯರ್ ಫೋನ್, ಮೈಕ್ರೋಫೋನ್, ಮತ್ತು ಕೈಗಡಿಯಾರಗಳನ್ನು ಪರೀಕ್ಷಾ ಕೊಠಡಿಯೊಳಗೆ ಅನುಮತಿಸಲಾಗುವುದಿಲ್ಲ. ಪರೀಕ್ಷಾ ಕೊಠಡಿ ಒಳಕ್ಕೆ ತಿನ್ನುವ ಪದಾರ್ಥ ತೆಗೆದುಕೊಂಡು ಹೋಗುವಂತಿಲ್ಲ. ಪೆನ್ಸಿಲ್, ಪೇಪರ್, ಎರೇಸರ್, ಜಾಮಿಟ್ರಿ ಬಾಕ್ಸ್ ಮತ್ತು ಲಾಗ್ ಟೇಬಲ್ಗಳನ್ನು ಪರೀಕ್ಷಾ ಕೇಂದ್ರದೊಳಕ್ಕೆ ತೆಗೆದುಕೊಂಡು ಹೋಗುವಂತಿಲ್ಲ ಎಂದಿದ್ದಾರೆ.
ಪ್ರವೇಶಪತ್ರ ತರುವುದು ಕಡ್ಡಾಯ. ಇತ್ತೀಚಿನ ಎರಡು ಪಾಸ್ ಪೋರ್ಟ್ ಅಳತೆಯ ಫೋಟೋ ಕೊಂಡೊಯ್ಯಬೇಕು. ಸರಕಾರದಿಂದ ಮಾನ್ಯವಾದ ಫೆÇೀಟೋ ಗುರುತಿನ ಚೀಟಿ ಹೊಂದಿರುವುದು ಕಡ್ಡಾಯ. ಪರೀಕ್ಷೆಯ ಕೊನೆಯ ಬೆಲ್ ಆಗುವವರೆಗೂ ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗಲು ಅನುಮತಿ ಇರುವುದಿಲ್ಲ ಎಂದು ರಮ್ಯಾ ಅವರು ವಿವರಿಸಿದ್ದಾರೆ.
ಒಂದು ಕೇಂದ್ರದಲ್ಲಿ ಪರೀಕ್ಷೆ: ಪರೀಕ್ಷೆಗಳಿಗೆ ಪ್ರವೇಶ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಲು ಈಗಾಗಲೇ ಲಿಂಕ್ ನೀಡಲಾಗಿದೆ. ಕೆಲವು ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಅರ್ಜಿಗಳನ್ನು ಸಲ್ಲಿಸಿರುವ ಕಾರಣ ಒಂದಕ್ಕಿಂತ ಹೆಚ್ಚು ಪ್ರವೇಶ ಪತ್ರಗಳು ಬಿಡುಗಡೆಯಾಗಿರುತ್ತದೆ. ಇಂತಹ ಅಭ್ಯರ್ಥಿಗಳು ಮಾತ್ರ ಯಾವುದಾದರು ಒಂದು ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆಯನ್ನು ಬರೆಯತಕ್ಕದ್ದು, ಪರೀಕ್ಷಾ ದಿನದಂದು ಎರಡೂ ಪ್ರವೇಶ ಪತ್ರಗಳನ್ನು ಕೊಠಡಿಯ ಮೇಲ್ವಿಚಾರಕರಿಗೆ ಸಲ್ಲಿಸಬೇಕು ಎಂದು ರಮ್ಯಾ ತಿಳಿಸಿದ್ದಾರೆ.
ಪೊಲೀಸ್ ಸಿಬ್ಬಂದಿ ನಿಯೋಜನೆ: ಕೆಇಎ ಕೋರಿಕೆ ಹಿನ್ನೆಲೆಯಲ್ಲಿ ಡಿಜಿ ಮತ್ತು ಐಜಿಪಿಯವರು ಸಂಬಂಧಿಸಿದ ಜಿಲ್ಲೆಗಳ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು ಪಾರದರ್ಶಕವಾಗಿ ಪರೀಕ್ಷಾ ನಡೆಸಲು ಅನುಕೂಲವಾಗುವಂತೆ ಕ್ರಮಗಳನ್ನು ಕೈಗೊಳ್ಳಲು ನಿರ್ದೇಶಿಸಿದ್ದಾರೆ.
ಅಭ್ಯರ್ಥಿಗಳ ಸೂಕ್ತ ತಪಾಸಣೆಗಾಗಿ ಪ್ರತಿ ಪರೀಕ್ಷಾ ಕೇಂದ್ರದಲ್ಲೂ 25 ವಿದ್ಯಾರ್ಥಿಗಳ ಗುಂಪಿಗೆ ಒಬ್ಬರಂತೆ ಪೊಲೀಸ್ ಸಿಬ್ಬಂದಿ ನಿಯೋಜಿಸಬೇಕು. ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ಮೆಟಲ್ ಡಿಟೆಕ್ಟರ್ ಮತ್ತು ಪೊಲೀಸ್ ಇಲಾಖೆಗೆ ಸೂಕ್ತವೆನಿಸುವ ಇತರೆ ಉಪಕರಣಗಳನ್ನು ಬಳಸಿ ತಪಾಸಣೆಗೆ ಒಳಪಡಿಸಬೇಕು.
ಪರೀಕ್ಷೆ ನಡೆಯುವ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ ಯಾವುದೇ ಕಾರು, ಮಿನಿ ಬಸ್' ವಾಹನಗಳನ್ನು ನಿಲ್ಲಿಸದಂತೆ ನಿಬರ್ಂಧ ಹಾಕಬೇಕು. ಪರೀಕ್ಷಾ ಕೇಂದ್ರದ ಸುತ್ತ ಇರುವ ಹೋಟೆಲ್, ಪೇಯಿಂಗ್ ಗೆಸ್ಟ್, ವಸತಿ ನಿಲಯಗಳು ಸೇರಿದಂತೆ ಸಾರ್ವಜನಿಕ ಪ್ರದೇಶಗಳಲ್ಲಿ ಸಂಶಯಾಸ್ಪದವಾಗಿ ಓಡಾಡುತ್ತಿರುವ ವ್ಯಕ್ತಿಗಳನ್ನು ಪರಿಶೀಲಿಸಬೇಕು ಎಂದು ತಿಳಿಸಲಾಗಿದೆ.
ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಕ್ರಮ ಕಂಡು ಬಂದಲ್ಲಿ ಆಯಾ ವ್ಯಾಪ್ತಿಯ ಪೊಲೀಸ್ ಕಮಿಷನರ್ ರನ್ನು, ಪೊಲೀಸ್ ವರಿಷ್ಠಾಧಿಕಾರಿಯವರನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಡಿಜಿಪಿ ಸ್ಪಷ್ಟಪಡಿಸಿದ್ದಾರೆ.
ಲಿಪಿಕಾರರ ಸೇವೆ ಪಡೆಯಲು ನಿಯಮ: ದೃಷ್ಟಿಮಾಂದ್ಯತೆ, ಚಲನವಲನ ವೈಕಲ್ಯ, ಮಿದುಳಿನ ಪಾಶ್ರ್ವವಾಯು ಅಂಗ ಊನತೆಯನ್ನು ಮತ್ತು ಇತರೆ ವರ್ಗಗಳ ಎದ್ದು ಕಾಣುವಂತಹ ಅಂಗಊನತೆ ಹೊಂದಿರುವ ಅಭ್ಯರ್ಥಿಗಳಿಗೆ ಲಿಪಿಕಾರರ ಸೌಲಭ್ಯಗಳನ್ನು ಹೊಂದಲು ಅರ್ಹತೆ ಇರುತ್ತದೆ. ಇಂತಹ ಅಭ್ಯರ್ಥಿಗಳು ಪರೀಕ್ಷೆ ಬರೆಯಲು ಸ್ವತಃ ಲಿಪಿಕಾರರನ್ನು ಕರೆತರಬಹುದು. ಅಂತಹ ಲಿಪಿಕಾರರ ವಿದ್ಯಾರ್ಹತೆಯು ಪದವಿಗಿಂತ ಕಡಿಮೆ ಇರಬೇಕು. ಅಸಮರ್ಥತೆ ಹೊಂದಿರುವ ಬಗ್ಗೆ ಪ್ರಮಾಣ ಪತ್ರವನ್ನು ಹಾಗೂ ತನ್ನದೇ ಆದ ಲಿಪಿಕಾರರ ಸೇವೆ ಪಡೆಯಲು ಅನುಬಂಧ-02 ರಲ್ಲಿ ನಮೂನೆಯಂತೆ ಮುಚ್ಛಳಿಕೆ ಪತ್ರವನ್ನು ಪರೀಕ್ಷಾ ಕೇಂದ್ರದ ಮುಖ್ಯಸ್ಧರಿಗೆ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.