ಬಂದ್ -ಪ್ರತಿಭಟನೆಯನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತಿಯುತವಾಗಿ ನಡೆಸಿ: ಸಿಎಂ ಮನವಿ
ʼʼರೈತರ ಆಕ್ರೋಶವನ್ನು ನಾನು ಅರ್ಥ ಮಾಡಿಕೊಳ್ಳಬಲ್ಲೆʼʼ
ಬೆಂಗಳೂರು, ಸೆ. 25: ʼʼರೈತರ ಆಕ್ರೋಶವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಬಂದ್-ಪ್ರತಿಭಟನೆ ಮಾಡುವ ರೈತರು ಮತ್ತು ಕನ್ನಡ ಹೋರಾಟಗಾರರ ಹಕ್ಕನ್ನೂ ನಾನು ಗೌರವಿಸುತ್ತೇನೆ, ಅವರ ಹೋರಾಟವನ್ನು ಹತ್ತಿಕ್ಕುವ ಕೆಲಸವನ್ನು ನಮ್ಮ ಸರ್ಕಾರ ಮಾಡುವುದಿಲ್ಲʼʼ ಎಂದು ಮುಖ್ಯಮಂತ್ರಿ ಸಿದ್ದರಾಮ್ಯಯ ತಿಳಿಸಿದ್ದಾರೆ.
ಈ ಸಂಬಂಧ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ ಅವರು, ʼʼಇದೇ ವೇಳೆ ಕೆಲವು ರಾಜಕೀಯ ನಾಯಕರು ತಪ್ಪು ಮಾಹಿತಿ ಮೂಲಕ ಜನರನ್ನು ಪ್ರಚೋದಿಸುವ ಕೆಲಸವನ್ನೂ ಮಾಡುತ್ತಿರುವುದೂ ಸರ್ಕಾರದ ಗಮನಕ್ಕೆ ಬಂದಿದೆʼʼ ಎಂದು ಹೇಳಿದ್ದಾರೆ.
ʼʼನಮ್ಮ ಪ್ರಜ್ಞಾವಂತ ರೈತ ಮತ್ತು ಕನ್ನಡ ಹೋರಾಟಗಾರರು ಇಂತಹ ರಾಜಕೀಯ ದುರುದ್ದೇಶಪೂರಿತ ಅಪಪ್ರಚಾರಕ್ಕೆ ಬಲಿಯಾಗದೆ ಬಂದ್ -ಪ್ರತಿಭಟನೆಯನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಶಾಂತಿಯುತವಾಗಿ ನಡೆಸಬೇಕುʼʼ ಎಂದು ಅವರು ಮನವಿ ಮಾಡಿದ್ದಾರೆ.
ʼʼತಮಿಳುನಾಡು ರಾಜ್ಯ ಮೊದಲು ಪ್ರತಿದಿನ 24,000 ಕ್ಯುಸೆಕ್ ನೀರು ಹರಿಸುವಂತೆ ಬೇಡಿಕೆ ಸಲ್ಲಿಸಿತ್ತು, ನಾವು ನಿರಾಕರಿಸಿದ್ದ ಕಾರಣ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನಾವು ಬಿಡಬೇಕಾದ ನೀರಿನ ಪ್ರಮಾಣವನ್ನು 7,200 ಕ್ಯುಸೆಕ್ ಗೆ ಇಳಿಸಿತ್ತು. ನೀರಿನ ಕೊರತೆಯಿಂದಾಗಿ ಇಷ್ಟು ಪ್ರಮಾಣದ ನೀರನ್ನು ಬಿಡಲು ಸಾಧ್ಯವಿಲ್ಲ ಎಂದು ನಮ್ಮ ಅಧಿಕಾರಿಗಳು ವಾದಿಸಿದ ನಂತರ ಪ್ರತಿದಿನ 5,000 ಕ್ಯುಸೆಕ್ ನೀರು ಹರಿಸಬೇಕೆಂದು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ನೀಡಿತ್ತು. ಇದೇ ಆದೇಶವನ್ನು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಒಪ್ಪಿಕೊಂಡು ನಮಗೆ ನೀರು ಬಿಡಲು ಆದೇಶ ನೀಡಿತ್ತುʼʼ ಎಂದು ವಿವರಿಸಿದ್ದಾರೆ.
ʼʼ5,000 ಕ್ಯುಸೆಕ್ ನೀರು ಕೂಡಾ ಬಿಡಲು ಸಾಧ್ಯ ಇಲ್ಲ ಎಂದು ನಾವು ಸುಪ್ರೀಂ ಕೋರ್ಟ್ ಗೆ ಪರಿಹಾರ ಕೋರಿ ಮೊರೆ ಹೋಗಿದ್ದೆವು. ಆದರೆ ಪ್ರಾಧಿಕಾರದ ಆದೇಶದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳೆರಡರ ಅರ್ಜಿಯನ್ನೂ ವಜಾಮಾಡಿರುವ ಕಾರಣ ಸೆಪ್ಟೆಂಬರ್ 26ರ ವರೆಗೆ 5,000 ಕ್ಯುಸೆಕ್ ನೀರು ಹರಿಸುವುದು ನಮಗೆ ಅನಿವಾರ್ಯವಾಯಿತು. ಈಗ 26ರ ನಂತರ ನಾವು ಪ್ರಾಧಿಕಾರವನ್ನು ಮತ್ತೆ ಸಂಪರ್ಕಿಸಿ ಇನ್ನು ನೀರು ಬಿಡಲಾಗುವುದಿಲ್ಲ ಎಂಬ ನಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸುತ್ತೇವೆʼʼ ಎಂದು ಅವರು ಸ್ಪಷ್ಟಪಡಿಸಿದ್ದಾರೆ.