ಆಹಾರ ಪದಾರ್ಥ ವ್ಯರ್ಥ ತಡೆಗೆ ಕಾನೂನು ರೂಪಿಸಲು ಚಿಂತನೆ : ಕೆ.ಎಚ್.ಮುನಿಯಪ್ಪ
ಬೆಂಗಳೂರು: ಆಹಾರ ಪದಾರ್ಥಗಳು ಹೋಟೆಲ್, ಕಲ್ಯಾಣ ಮಂಟಪಗಳು ಮೂಲಕ ವ್ಯರ್ಥವಾಗುತ್ತಿರುವುದನ್ನು ತಡೆಯಲು ಸದ್ಯದಲ್ಲಿಯೇ ಕಾನೂನು ರೂಪಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವರಾದ ಕೆ.ಎಚ್.ಮುನಿಯಪ್ಪ ತಿಳಿಸಿದ್ದಾರೆ.
ಬುಧವಾರ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಆಹಾರ ವಿಜ್ಞಾನ ಮತ್ತು ಪೋಷಣೆ ವಿಭಾಗದ ವತಿಯಿಂದ ಡಾ.ಬಾಬು ರಾಜೇಂದ್ರ ಪ್ರಸಾದ್ ಅಂತಾರಾಷ್ಟ್ರೀಯ ಸಮಾವೇಶ ಭವನದಲ್ಲಿ ವಿಶ್ವ ಆಹಾರ ದಿನಾಚರಣೆ-2024ರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದಲ್ಲಿ ವಾರ್ಷಿಕವಾಗಿ ಸುಮಾರು 90 ಸಾವಿರ ಕೋಟಿ ರೂ.ಗಳಷ್ಟು ಆಹಾರ ಪದಾರ್ಥಗಳು ಪೋಲಾಗುತ್ತಿದೆ ಎಂದರು.
ನಮ್ಮ ಅಹಾರ ವ್ಯವಸ್ಥೆಯನ್ನು ಪರಿವರ್ತಿಸಲು ಮತ್ತು ಹಸಿವು ನಿವಾರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಮ್ಮ ಸರಕಾರ ಅನ್ನಭಾಗ್ಯ ಯೋಜನೆ ಜಾರಿಗೆ ತಂದು ರಾಜ್ಯದ ಕಟ್ಟ ಕಡೆಯ ಪ್ರಜೆಯೂ ಹಸಿವಿನಿಂದ ಮಲಗಬಾರದು ಎಂಬ ಇಟ್ಟುಕೊಂಡಿದೆ ಎಂದು ಅವರು ತಿಳಿಸಿದರು.
ಆಹಾರ ದವಸದಾನ್ಯಗಳನ್ನು ಇತರೆ ದೇಶಗಳಿಗೆ ರಫ್ತು ಮಾಡುವಷ್ಟು ಬಲಿಷ್ಠವಾಗಿದ್ದೇವೆ. ಆದರೆ ಸಿರಿದಾನ್ಯಗಳ ಬೆಳೆಯುವ ಪ್ರಮಾಣ ಕಡಿಮೆಯಾಗಿದ್ದು, ಇವನ್ನು ರೈತರು ತಮ್ಮ ಜಮೀನಿನಲ್ಲಿ ಬೆಳೆಯುವ ಕಡೆ ಗಮನವಹಿಸಬೇಕು. ಈ ನಿಟ್ಟಿನಲ್ಲಿ ಸರಕಾರದ ವತಿಯಿಂದ ಎಲ್ಲ ರೀತಿಯ ಸಹಕಾರ ಕೃಷಿ ವಿಶ್ವವಿದ್ಯಾಲಯಕ್ಕೆ ಇರುತ್ತದೆ ಎಂದು ಅವರು ಹೇಳಿದರು.
ಇದೇ ವೇಳೆ ಸಚಿವರು ಮಕ್ಕಳಿಗೆ ಅನ್ನ ಪೋಲು ಮಾಡದಂತೆ ಮಕ್ಕಳಿಗೆ ಪ್ರಮಾಣ ಮಾಡಿಸಿದರು. ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ್, ಸಿಂಡಿಕೇಟ್ ಸದಸ್ಯ ಪ್ರಭಾಕರ ಶೆಟ್ಟಿ, ಹರೀಶ್, ಚಂದ್ರೇಗೌಡ, ನಾರಾಯಣಸ್ವಾಮಿ, ಡೀನ್ ಪ್ರಕಾಶ್, ಸಂಶೋಧನಾ ನಿರ್ದೇಶಕ ಶಿವರಾಮ್, ಪ್ರಾಧ್ಯಾಪಕ ಉಷಾ ರವೀಂದ್ರ, ಕಲ್ಪನಾ ಹಾಗೂ ಸಿಬ್ಬಂದಿಯವರು ಉಪಸ್ಥಿತರಿದ್ದರು.