ಸೌಜನ್ಯ ಹತ್ಯೆ ಪ್ರಕರಣ: ಮರುತನಿಖೆಗಾಗಿ ವೀರೇಂದ್ರ ಹೆಗ್ಗಡೆ ಕುಟುಂಬ ಹೈಕೋರ್ಟ್ ಗೆ
ಬೆಂಗಳೂರು, ಆ.28: ವಿದ್ಯಾರ್ಥಿನಿ ಸೌಜನ್ಯ ಹತ್ಯೆ ಮತ್ತು ಸಿಬಿಐ ನ್ಯಾಯಾಲಯದ ತೀರ್ಪಿನ ನಂತರ ಧರ್ಮಸ್ಥಳ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕುಟುಂಬದವರನ್ನು ಸ್ಥಾಪಿತ ಹಿತಾಸಕ್ತಿಗಳು ಅವಹೇಳನ ಮಾಡುತ್ತಿರುವ ಬೆಳವಣಿಗೆಗಳು ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ಸೌಜನ್ಯ ಕೇಸ್‍ನಲ್ಲಿ ನ್ಯಾಯ ಒದಗಿಸಲು ಮತ್ತೆ ಯಾವುದಾದರೂ ತನಿಖೆ ನಡೆಸಲು ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಡಾ.ಹೆಗ್ಗಡೆ ಕುಟುಂಬದವರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಕೋರ್ಟ್‍ನ ಆದೇಶಗಳನ್ನು ತಿದ್ದಿ ನಿಜವನ್ನು ಮರೆಮಾಚುತ್ತಿರುವ, ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸುತ್ತಿರುವ ಹಾಗೂ ನ್ಯಾಯಾಲಯ ಮತ್ತು ನ್ಯಾಯಮೂರ್ತಿಗಳನ್ನು ನಿಂದಿಸುತ್ತಿರುವ ಹೋರಾಟಗಾರ ಮಹೇಶ ಶೆಟ್ಟಿ ತಿಮರೋಡಿ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳುವಂತೆ ಡಾ.ಹೆಗ್ಗಡೆ ಕುಟುಂಬದವರ ಪರ ಕೋರ್ಟ್‍ಗೆ ಸಲ್ಲಿಕೆಯಾಗಿರುವ ರಿಟ್ ಅರ್ಜಿಯಲ್ಲಿ ಮನವಿ ಸಲ್ಲಿಸಲಾಗಿದೆ.
ಸೌಜನ್ಯ ಹತ್ಯೆ ಪ್ರಕರಣದ ಕುರಿತು ಈಗಾಗಲೇ ಸಿಬಿಐ ತನಿಖೆ ನಡೆಸಿ ನ್ಯಾಯಾಲಯಕ್ಕೆ ಜಾರ್ಜ್‍ಶೀಟ್ ಅನ್ನೂ ಸಲ್ಲಿಸಿದ್ದು, ಪ್ರಕರಣದಲ್ಲಿ ಬಂಧಿತ ಸಂತೋಷ್ ರಾವ್‍ನನ್ನು ನ್ಯಾಯಾಲಯವೇ ನಿರಪರಾಧಿ ಎಂದು ಬಿಡುಗಡೆ ಮಾಡಿದೆ. ಈ ಹಿನ್ನೆಲೆಯಲ್ಲಿ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ತೀವ್ರ ಪ್ರತಿಭಟನೆಗಳು ಆರಂಭವಾಗಿವೆ.