‘ಮಿತಿಮೀರಿದ ಬಡ್ಡಿ’ ನಿಷೇಧಕ್ಕೆ ಕಾಯ್ದೆಗೆ ತಿದ್ದುಪಡಿ : ಕೆ.ಎನ್.ರಾಜಣ್ಣ

ಕೆ.ಎನ್.ರಾಜಣ್ಣ
ಬೆಂಗಳೂರು : ‘ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಕಾಯ್ದೆ-2004’ಕ್ಕೆ ತಿದ್ದುಪಡಿ ತರಲು ತೀರ್ಮಾನಿಸಲಾಗಿದೆ. ಈಗ ಗರಿಷ್ಠ 3 ವರ್ಷ ಶಿಕ್ಷೆ ವಿಧಿಸಬಹುದು. ಅದನ್ನು ಗರಿಷ್ಠ 10 ವರ್ಷಕ್ಕೆ ವಿಸ್ತರಿಸಲು ತಿದ್ದುಪಡಿ ತರಲು ಈಗಾಗಲೇ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದೇನೆ ಎಂದು ಸಹಕಾರ ಇಲಾಖೆ ಸಚಿವ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಿತಿಮೀರಿ ಬಡ್ಡಿ ವಿಧಿಸುವ ಲೇವಾದೇವಿಗಾರರ ಮೇಲೆ 10 ವರ್ಷ ಶಿಕ್ಷೆ ವಿಧಿಸುವ ಕಠಿಣ ಕಾನೂನಿನ ತಿದ್ದುಪಡಿ ಸಂಬಂಧ ಸಹಕಾರ ಇಲಾಖೆಯ ಅಧಿಕಾರಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಮುಂದಿನ ಅಧಿವೇಶನದಲ್ಲಿ ತಿದ್ದುಪಡಿ ಮಸೂದೆ ಮಂಡಿಸಲು ಯೋಚಿಸಿದ್ದೇವೆ ಎಂದರು.
ಈಗಿರುವ ಕಾನೂನನ್ನೇ ಇನ್ನಷ್ಟು ಕಠಿಣಗೊಳಿಸಿದರೆ ಅನಧಿಕೃತ ಹಣಕಾಸು ಸಂಸ್ಥೆಗಳು, ಲೇವಾದೇವಿಗಾರರ ಕಿರುಕುಳಕ್ಕೆ ಅಂಕುಶ ಹಾಕಬಹುದಾಗಿದೆ. ಈ ನಿಟ್ಟಿನಲ್ಲಿ ಸಹಕಾರ ಇಲಾಖೆಯ ವ್ಯಾಪ್ತಿಗೆ ಬರುವ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಲು ತಯಾರಿ ನಡೆಸಲಾಗಿದೆ ಎಂದು ಕೆ.ಎನ್.ರಾಜಣ್ಣ ಹೇಳಿದರು.
ನಮ್ಮಲ್ಲೇ ಕಠಿಣ ಕಾನೂನಿದೆ. ಐಪಿಸಿ, ಸಿಆರ್ಪಿಸಿ, ಮನಿ ಲಾಂಡ್ರಿಂಗ್ ಕಾಯ್ದೆ ಇದೆ. ಅದನ್ನೇ ಜಾರಿ ಮಾಡಿದರೆ ಸಾಕು. ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡರೆ, ಅದಕ್ಕೆ ಪ್ರೇರೇಪಣೆ ನೀಡಿದ ಆರೋಪದಲ್ಲಿ ಪ್ರಕರಣ ದಾಖಲಿಸಬಹುದು. ಇದನ್ನು ಅಧಿಕಾರಿಗಳು ಏಕೆ ಪ್ರಯೋಗಿಸುತ್ತಿಲ್ಲ ಎಂದು ಕೆ.ಎನ್.ರಾಜಣ್ಣ ಅಸಮಾಧಾನ ಹೊರಹಾಕಿದರು.