ಉದಯಗಿರಿ ಗಲಾಟೆಗೆ ಪೊಲೀಸರ ಕರ್ತವ್ಯಲೋಪ ಕಾರಣ : ಕೆ.ಎನ್.ರಾಜಣ್ಣ

ಕೆ.ಎನ್.ರಾಜಣ್ಣ
ಬೆಂಗಳೂರು : ಮೈಸೂರಿನ ಉದಯಗಿರಿಯಲ್ಲಿ ನಡೆದಿರುವ ಕಲ್ಲುತೂರಾಟ ಪ್ರಕರಣದಲ್ಲಿ ಪೊಲೀಸರು ಕರ್ತವ್ಯಲೋಪ ಮಾಡಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಕಿಡಿಕಾರಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರಿಗೆ ಕನಿಷ್ಠ ಸಾಮಾನ್ಯ ಪ್ರಜ್ಞೆ ಬೇಡವೇ?, ಯಾರೋ ಆರೆಸ್ಸೆಸ್ನ ವ್ಯಕ್ತಿ ಧಾರ್ಮಿಕ ನಿಂದನೆಯ ಕೃತ್ಯವೆಸಗಿದ್ದಾನೆ. ಆತನ ಮೇಲೆ ಪ್ರಕರಣ ದಾಖಲಾಗಿ ಬಂಧಿಸಲಾಗಿದೆ. ಆರೋಪಿಯನ್ನು ಮುಸ್ಲಿಮ್ ಜನಸಂಖ್ಯೆ ಶೇ.99 ರಷ್ಟಿರುವ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ. ಸಹಜವಾಗಿಯೇ ಜನ ಒಟ್ಟಾಗಿ ಸೇರಿದ್ದಾರೆ, ಗಲಾಟೆಯಾಗಿದೆ ಎಂದರು.
ಆಡಳಿತ ನಡೆಸುವುದು ಸಚಿವರ ಜವಾಬ್ದಾರಿಯಷ್ಟೇ ಅಲ್ಲ, ಅಧಿಕಾರಿಗಳಿಗೂ ಹೊಣೆಗಾರಿಕೆ ಇದೆ. ಸ್ಥಳೀಯವಾಗಿ ಕೆಲಸ ಮಾಡುವ ಪೊಲೀಸರಿಗೆ ತಲೆಯಲ್ಲಿ ಬುದ್ಧಿ ಬೇಡವೇ?, ರಸ್ತೆಯಲ್ಲಿ ಹೋಗುವ ಕೆಲಸಕ್ಕೆ ಬಾರದ ಅನಾಮಧೇಯನಿಗಿರುವ ಸಾಮಾನ್ಯ ಜ್ಞಾನ ದೊಡ್ಡ ಬ್ಯಾಡ್ಜ್ ಗಳನ್ನು ಹಾಕಿಕೊಂಡು ತಿರುಗುವ ಅಧಿಕಾರಿಗಳಿಗೆ ಇಲ್ಲವೇ?, ಬಂಧನದ ನಂತರ ನಡೆದ ಗಲಭೆ ಪ್ರಕರಣಗಳಿಗೆ ಸ್ಥಳೀಯ ಪೊಲೀಸರೇ ಕಾರಣ ಎಂದು ಕೆ.ಎನ್.ರಾಜಣ್ಣ ಆಕ್ರೋಶ ವ್ಯಕ್ತಪಡಿಸಿದರು.
ಭದ್ರಾವತಿಯ ಕಾಂಗ್ರೆಸ್ ಶಾಸಕ ಸಂಗಮೇಶ್ ಅವರ ಪುತ್ರ ಮಹಿಳಾ ಅಧಿಕಾರಿಯ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿ ದರ್ಪ ಪ್ರದರ್ಶಿಸಿರುವುದಕ್ಕೆ ಸೂಕ್ತ ಕ್ರಮ ಕೈಗೊಳ್ಳಬೇಕು. ಯಾರೇ ಇರಲಿ, ಸಚಿವರಿರಲಿ, ಶಾಸಕರಿರಲಿ ಅಥವಾ ಅವರ ಮಕ್ಕಳೇ ಇರಲಿ ಅಧಿಕಾರಿಗಳನ್ನು ಅವಹೇಳನಕಾರಿಯಾಗಿ ನಿಂದಿಸುವುದು ಶಿಕ್ಷಾರ್ಹ ಅಪರಾಧ. ಹೀಗಾಗಿ ಸೂಕ್ತ ಕ್ರಮ ಕೈಗೊಳ್ಳುವುದು ಅಗತ್ಯವಿದೆ ಎಂದು ಕೆ.ಎನ್.ರಾಜಣ್ಣ ಆಗ್ರಹಿಸಿದರು.
ಕೆಪಿಸಿಸಿಗೆ ಪೂರ್ಣ ಪ್ರಮಾಣದ ಅಧ್ಯಕ್ಷರಾಗಿ ಡಿ.ಕೆ.ಶಿವಕುಮಾರ್ ಕೆಲಸ ನಿರ್ವಹಿಸುತ್ತಿದ್ದಾರೆ. ಪಕ್ಷದ ಅಧ್ಯಕ್ಷರ ಬದಲಾವಣೆ ಬಗ್ಗೆ ಯಾರೂ ಚರ್ಚೆ ಮಾಡಬಾರದು ಎಂದು ಎಐಸಿಸಿ ಅಧ್ಯಕ್ಷರು ಸೂಚನೆ ನೀಡಿದ್ದಾರೆ. ಉಳಿದ ನಿರ್ಧಾರಗಳನ್ನು ಹೈಕಮಾಂಡ್ ಸೂಕ್ತ ಕಾಲಕ್ಕೆ ತೆಗೆದುಕೊಳ್ಳುತ್ತದೆ ಎಂದು ಕೆ.ಎನ್.ರಾಜಣ್ಣ ತಿಳಿಸಿದರು.
ಜಾತಿಯ ಸಮಾವೇಶಗಳಾದರೆ ಪಕ್ಷಕ್ಕೆ ಬಲ: ‘ನಾವು ಪಕ್ಷ ಸಂಘಟನೆಗೆ ಒತ್ತು ನೀಡುತ್ತೇವೆ. ಗುಂಪುಗಾರಿಕೆಗೆ ಬೆಂಬಲ ನೀಡುವುದಿಲ್ಲ. ಜಾತಿಯ ಸಮಾವೇಶಗಳಾದರೆ ಅದು ಪಕ್ಷಕ್ಕೆ ಬಲ ತಂದುಕೊಡುತ್ತದೆ. ಎಸ್ಸಿ/ಎಸ್ಟಿ, ಓಬಿಸಿ ಸೇರಿದಂತೆ ಯಾವುದೇ ಸಮುದಾಯಗಳ ಕಾರ್ಯಕ್ರಮಗಳಾದರೂ ಪಕ್ಷದ ವೇದಿಕೆಯಲ್ಲೇ ಮಾಡುತ್ತೇವೆ’
-ಕೆ.ಎನ್.ರಾಜಣ್ಣ ಸಹಕಾರ ಸಚಿವ
ಕೃಷಿ ಸಾಲ ಕಡಿತದ ಬಗ್ಗೆ ಕೇಂದ್ರ ಸಚಿವರಿಗೆ ಮನವರಿಕೆ: ‘ನಬಾರ್ಡ್ನಿಂದ ರಾಜ್ಯಕ್ಕೆ ನೀಡುವ ಕೃಷಿ ಸಾಲದಲ್ಲಿ ಶೇ.58ರಷ್ಟು ಕಡಿತವಾಗಿದೆ. ಇದರಿಂದ ರೈತರಿಗೆ ತೊಂದರೆಯಾಗಿದೆ. ತಪ್ಪುಗ್ರಹಿಕೆಯಿಂದ ಈ ಲೋಪವಾಗಿದ್ದು, ಕೇಂದ್ರ ಸಹಕಾರಿ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಮನವರಿಕೆ ಮಾಡಿಕೊಡುತ್ತೇನೆ. ಈ ಬಾರಿ ವಾಣಿಜ್ಯ ಬ್ಯಾಂಕ್ಗಳು ಚಿನ್ನಾಭರಣ ಸಾಲವನ್ನು ಕೃಷಿ ಸಾಲ ಎಂದು ತಪ್ಪು ಮಾಹಿತಿ ನೀಡಿವೆ. ಶೇ.17ರಷ್ಟು ಹಾಗೂ ಶೇ.2.5ರಷ್ಟು ಸೇರಿ ಕೃಷಿಸಾಲ ನೀಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯಕ್ಕೆ ತಿಳಿಸಿವೆ. ಈ ತಪ್ಪು ಗ್ರಹಿಕೆಯಿಂದಾಗಿ ನಬಾರ್ಡ್ ರಾಜ್ಯಕ್ಕೆ ನೀಡಬೇಕಾದ ಕೃಷಿ ಸಾಲದ ಮೊತ್ತದಲ್ಲಿ ಕಡಿತ ಮಾಡಿದೆ ಎಂದು ಕೆ.ಎನ್.ರಾಜಣ್ಣ ತಿಳಿಸಿದರು.