ಶೋಷಿತರ ಸಮಾವೇಶ ನಡೆಸಲು ವರಿಷ್ಠರಿಗೆ ಮನವಿ ಮಾಡಿದ್ದೇನೆ : ಕೆ.ಎನ್.ರಾಜಣ್ಣ

ಕೆ.ಎನ್.ರಾಜಣ್ಣ
ಹೊಸದಿಲ್ಲಿ : ರಾಜ್ಯದಲ್ಲಿ ಶೋಷಿತರ ಸಮಾವೇಶ ನಡೆಸಲು ಪಕ್ಷದ ವರಿಷ್ಠರಿಗೆ ಮನವಿ ಮಾಡಿದ್ದು, ರಾಷ್ಟ್ರೀಯ ನಾಯಕರು ಸಮಾವೇಶದಲ್ಲಿ ಪಾಲ್ಗೊಳ್ಳುವ ಭರವಸೆ ನೀಡಿದ್ದಾರೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಇಂದಿಲ್ಲಿ ತಿಳಿಸಿದ್ದಾರೆ.
ಶುಕ್ರವಾರ ಹೊಸದಿಲ್ಲಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿನ ಶೋಷಿತರ ಸಮಾವೇಶನ ನಡೆಸುವ ಸಂಬಂಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರಿಗೂ ಆಹ್ವಾನ ನೀಡುತ್ತೇವೆ' ಎಂದು ಇದೇ ಸಂದರ್ಭದಲ್ಲಿ ವಿವರಣೆ ನೀಡಿದರು.
ಉಸ್ತುವಾರಿ ಸಚಿವ ಸ್ಥಾನದಿಂದ ಬಿಡುಗಡೆಗೆ ಕೋರಿಕೆ: ‘ನನಗೆ ವಹಿಸಿರುವ ಹಾಸನ ಜಿಲ್ಲಾ ಉಸ್ತುವಾರಿ ಸ್ಥಾನದಿಂದ ಬಿಡುಗಡೆ ಮಾಡಿ ಎಂದು ಕೋರಿದ್ದೇನೆ. ನಾನು ತುಮಕೂರು ಜಿಲ್ಲೆ ಹಾಗೂ ಪಕ್ಷ ಸಂಘಟನೆ ಕಡೆಗೆ ಗಮನ ನೀಡಬೇಕಿದೆ. ಈ ಸಂಬಂಧ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಪತ್ರ ರವಾನಿಸಿದ್ದೇನೆ ಎಂದು ರಾಜಣ್ಣ ಮಾಹಿತಿ ನೀಡಿದರು.
ದಿಲ್ಲಿಯಲ್ಲಿ ಪಕ್ಷದ ಹಿರಿಯ ಮುಖಂಡರನ್ನು ಭೇಟಿ ಮಾಡಿದ್ದೇನೆ. ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿಯಾಗಿ, ಸರಕಾರ ಮತ್ತು ಪಕ್ಷದ ಬೆಳವಣಿಗೆ ಕುರಿತು ಗಮನಕ್ಕೆ ತಂದಿದ್ದೇನೆ. ಆದರೆ ಯಾವ ವಿಚಾರ ಚರ್ಚೆ ಮಾಡಿದ್ದೇನೆ ಎಂದು ಮಾಧ್ಯಮಗಳಿಗೆ ಹೇಳಲು ಸಾಧ್ಯವಿಲ್ಲ' ಎಂದು ರಾಜಣ್ಣ ಇದೇ ವೇಳೇ ಹೆಚ್ಚಿನ ಪ್ರತಿಕ್ರಿಯೆಗೆ ನಿರಾಕರಿಸಿದರು.
ಕಾಂಗ್ರೆಸ್ ಪಕ್ಷ ಸಂಘಟನೆ ಮಾಡಿ 2028ರಲ್ಲಿ ಸರಕಾರ ಅಧಿಕಾರಕ್ಕೆ ಬರಬೇಕಿದೆ. ನಾನು ಗಮನಕ್ಕೆ ತಂದ ಅಂಶಗಳ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಚುನಾವಣೆಯಲ್ಲಿ ಗೆಲ್ಲುಲು ಸಾಧ್ಯವಾಗದ ಕೆಳ ಸಮುದಾಯದ ನಾಯಕರಿಗೆ ಅವಕಾಶ ನೀಡಬೇಕು. ಇದರಿಂದ ಪಕ್ಷಕ್ಕೆ ಕೆಳ ಸಮುದಾಯದ ಬೆಂಬಲ ದೊರೆಯಲಿದೆ ಎಂದು ತಿಳಿಸಿದ್ದೇನೆ ಎಂದು ಅವರು ಹೇಳಿದರು.