ಡಿ.ಕೆ.ಶಿವಕುಮಾರ್ ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ : ಕೆ.ಎನ್.ರಾಜಣ್ಣ
"ನಾನು ದುಷ್ಪರಿಣಾಮ ಬೀರುವ ಮಾತುಗಳನ್ನು ಆಡುವುದಿಲ್ಲ"

ಡಿ.ಕೆ.ಶಿವಕುಮಾರ್/ರಾಜಣ್ಣ
ಬೆಂಗಳೂರು : ಡಿ.ಕೆ.ಶಿವಕುಮಾರ್ ಅವರು ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿರುಗೇಟು ನೀಡಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ‘ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳುವುದು ಬೇಡ’ ಎಂಬ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ನಾವು ಯಾರ ಹೆಸರನ್ನು ದುರ್ಬಳಕೆ ಮಾಡಿಕೊಂಡಿಲ್ಲ. ಡಿ.ಕೆ.ಶಿವಕುಮಾರ್ ಅವರು ಎಐಸಿಸಿ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುವುದು ಬೇಡ ಎಂದರು.
ಎಲ್ಲದಕ್ಕೂ ಎಐಸಿಸಿ ಹೇಳಿದೆ ಎಂದು ಎಐಸಿಸಿ ಹೆಸರನ್ನು ಡಿ.ಕೆ.ಶಿವಕುಮಾರ್ ದುರ್ಬಳಕೆ ಮಾಡಿಕೊಳ್ಳಬಾರದು. ಅವರು ಎಐಸಿಸಿ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಆರೋಪ ಅಲ್ಲ, ವಾಸ್ತವ ಎಂದು ಕೆ.ಎನ್.ರಾಜಣ್ಣ ಹೇಳಿದರು.
ಸಿಎಂ ಬದಲಾವಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಕೆ.ಎನ್.ರಾಜಣ್ಣ, ಹೈಕಮಾಂಡ್ ಎಲ್ಲರ ಅಭಿಪ್ರಾಯ ಸಂಗ್ರಹ ಮಾಡಲೇಬೇಕು. ಏಕಪ್ರಕಾರವಾಗಿ ನಿರ್ಧಾರ ಏನು ಮಾಡುವುದಿಲ್ಲ. ನಾವು ತಪ್ಪು ಮಾಡಿದರೆ ಮಾತ್ರ ಎಚ್ಚರಿಕೆ ಕೊಡಬೇಕು. ನಾವೇನು ತಪ್ಪು ಮಾಡಿಲ್ಲ. ಹೈಕಮಾಂಡ್ ಎದುರು ನಾವು ಹೋಗುತ್ತಿಲ್ಲ. ಯಾರು ಕೂಡ ಹೈಕಮಾಂಡ್ ವಿರುದ್ಧ ಇಲ್ಲ ಎಂದರು.
ಹೈಕಮಾಂಡ್ ಭೇಟಿ ಮಾಡಿ ಏನು ಹೇಳಬೇಕೋ ಹೇಳಿದ್ದೇನೆ. ಎಲ್ಲವನ್ನೂ ಬಹಿರಂಗ ಮಾಡಲು ಆಗುವುದಿಲ್ಲ. ಯಾರ ವಿರುದ್ಧವೂ ನಾವು ಸಮಾವೇಶ ಮಾಡುತ್ತಿಲ್ಲ. ಪಕ್ಷ ಸಂಘಟನೆಗೆ ಮಾಡುತ್ತಿದ್ದೇವೆ. ಸಮಯ ಸಂದರ್ಭ ಬಂದಾಗ ಸಮಾವೇಶ ಮಾಡುತ್ತೇವೆ. ಅದರ ದಿನಾಂಕ ಇನ್ನೂ ನಿರ್ಧಾರ ಆಗಿಲ್ಲ. ರಾಹುಲ್ ಗಾಂಧಿ ಹಾಗೂ ಖರ್ಗೆಯವರನ್ನು ಕರೆದು ಸಮಾವೇಶ ಮಾಡಲಾಗುವುದು. ಶೋಷಿತ ವರ್ಗಗಳ ಸಂಘಟನೆಗಾಗಿ ಸಮಾವೇಶ ಮಾಡುತ್ತೇವೆ ಎಂದು ಕೆ.ಎನ್.ರಾಜಣ್ಣ ಸ್ಪಷ್ಟಪಡಿಸಿದರು.
ನನ್ನ ಹತ್ತಿರ ಎಚ್ಚರಿಕೆ ಎಲ್ಲ ನಡೆಯುವುದಿಲ್ಲ: ನಾನು ಸತ್ಪರಿಣಾಮ ಬೀರುವ ಮಾತನಾಡುತ್ತೇನೆಯೇ ಹೊರತು, ದುಷ್ಪರಿಣಾಮ ಬೀರುವ ಮಾತನಾಡುವುದಿಲ್ಲ. ಪೂರ್ಣಾವಧಿ ಮುಖ್ಯಮಂತ್ರಿ ವಿಚಾರದಲ್ಲಿ ನಾನೇನು ಹಟಕ್ಕೆ ಬಿದ್ದಿಲ್ಲ. ಅಂತಿಮ ನಿರ್ಧಾರ ಹೈಕಮಾಂಡ್ ಮಾಡುತ್ತದೆ. ಹೈಕಮಾಂಡ್ ಹೇಳಿದಂತೆ ಲೋಕಸಭೆ ಚುನಾವಣೆವರೆಗೆ ಅಧ್ಯಕ್ಷ ಎಂಬ ಕಾರಣಕ್ಕೆ ಕೇಳಿದ್ದೇವೆ. ಉಪ ಮುಖ್ಯಮಂತ್ರಿ ಸ್ಥಾನ ಹೆಚ್ಚುವರಿ ಕೊಟ್ಟಿದ್ದರೆ, ಲೋಕಸಭೆ ಚುನಾವಣೆಯಲ್ಲಿ ಸಹಾಯ ಆಗುತ್ತಿತ್ತು, ಈಗ ಕೇಳಲ್ಲ. ಡಿ.ಕೆ.ಶಿವಕುಮಾರ್ ಅವರ ಸಿಎಂ ಹೆಸರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಹೇಳಿಕೆ ಅಷ್ಟೇ, ಎಚ್ಚರಿಕೆ ಅಲ್ಲ. ನನ್ನ ಹತ್ತಿರ ಎಚ್ಚರಿಕೆ ಎಲ್ಲಾ ನಡೆಯುವುದಿಲ್ಲ ಎಂದು ಕೆ.ಎನ್.ರಾಜಣ್ಣ ಕಿಡಿಕಾರಿದರು.
ಡಿಕೆಶಿಗೂ ನನಗೂ ವಿಚಾರ ಭೇದ ಅಷ್ಟೇ: ನನಗೂ ಡಿ.ಕೆ.ಶಿವಕುಮಾರ್ಗೂ ವೈಯಕ್ತಿಕವಾಗಿ ಏನೂ ಇಲ್ಲ. ವಿಚಾರ ಭೇದ ಇರಬಹುದು ಅಷ್ಟೇ. ವಿಧಾನಸೌಧಕ್ಕೆ ನಾನು ಒಂದು ರಸ್ತೆಯಲ್ಲಿ ಹೋಗೋಣ ಅಂದರೆ, ಅವರು ಒಂದು ರಸ್ತೆಯಲ್ಲಿ ಹೋಗೋಣ ಎನ್ನಬಹುದು. ನಾನು ಅವರು ಸಾಕಷ್ಟು ವರ್ಷದ ಸ್ನೇಹಿತರು. ಒಟ್ಟಿಗೆ ವಿದೇಶ ಪ್ರವಾಸ ಎಲ್ಲಾ ಮಾಡಿದ್ದೇವೆ. ವಿಚಾರ ಭೇದ ಅಷ್ಟೇ, ವೈಯಕ್ತಿಕ ಏನೂ ಇಲ್ಲ. ಅವರನ್ನು ಮನೆಗೆ ಒಂದು ದಿನ ಊಟಕ್ಕೆ ಕರೆಯುತ್ತೇನೆ ಎಂದು ಕೆ.ಎನ್.ರಾಜಣ್ಣ ತಿಳಿಸಿದರು.