ಕೊಡಗು: ಲಾಟರಿ ಮೂಲಕ ಪಕ್ಷೇತರ ಅಭ್ಯರ್ಥಿಗೆ ಒಲಿದ ಗ್ರಾ.ಪಂ ಅಧ್ಯಕ್ಷ ಸ್ಥಾನ
ಮಡಿಕೇರಿ ಆ.7 : ಬೇಂಗೂರು ಗ್ರಾ.ಪಂ ಚೇರಂಬಾಣೆಯ ಎರಡನೇ ಅವಧಿಯ ಆಡಳಿತಕ್ಕಾಗಿ ಇಂದು ನಡೆದ ಚುನಾವಣೆಯಲ್ಲಿ ಯಾವುದೇ ಪಕ್ಷದಲ್ಲಿ ಗುರುತಿಸಿಕೊಳ್ಳದ ಸದಸ್ಯೆ ಪಟ್ಟಮಾಡ ಮಿಲನ್ ಮುತ್ತಣ್ಣ ಅವರಿಗೆ ಕಾಂಗ್ರೆಸ್ ಬೆಂಬಲದೊಂದಿಗೆ ಲಾಟರಿ ಮೂಲಕ ಅಧ್ಯಕ್ಷ ಸ್ಥಾನ ಒಲಿದು ಬಂದಿದೆ. ಉಪಾಧ್ಯಕ್ಷರಾಗಿ ಬಿಜೆಪಿಯ ರೆಬೆಲ್ ಸದಸ್ಯ ಕಾಂಗ್ರೆಸ್ ಬೆಂಬಲಿತ ಬಡ್ಡೀರ ಸೋಮಣ್ಣ ಆಯ್ಕೆಯಾಗಿದ್ದಾರೆ.
ಒಟ್ಟು 12 ಸದಸ್ಯ ಬಲದ ಗ್ರಾ.ಪಂ ಯಲ್ಲಿ 9 ಬಿಜೆಪಿ ಬೆಂಬಲಿತ, 2 ಕಾಂಗ್ರೆಸ್ ಬೆಂಬಲಿತ ಹಾಗೂ ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ.
ಪಕ್ಷೇತರ ಅಭ್ಯರ್ಥಿ ಮಿಲನ್ ಮುತ್ತಣ್ಣ ಅವರಿಗೆ ಕಾಂಗ್ರೆಸ್ ಬೆಂಬಲ ಸೂಚಿಸಿತ್ತು. ಬಿಜೆಪಿ ಬೆಂಬಲಿತರಾಗಿ ತಟ್ಟಂಡ ಸ್ವಾತಿ ಸ್ಪರ್ಧೆಯಲ್ಲಿದ್ದರು. ಆದರೆ ಅಂತಿಮವಾಗಿ ಇಬ್ಬರಿಗೂ ತಲಾ 6 ಮತಗಳು ಲಭಿಸಿದ ಕಾರಣ ಲಾಟರಿ ಮೂಲಕ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಿತು. ಅದೃಷ್ಟ ಮಿಲನ್ ಮುತ್ತಣ್ಣಗೆ ಒಲಿಯಿತು.
ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಬಡ್ಡೀರ ಸೋಮಣ್ಣ ಹಾಗೂ ಇವರ ಪ್ರತಿಸ್ಪರ್ಧಿಯಾಗಿ ಬಿಜೆಪಿಯ ಕೂರನ ಕಿಶೋರ್ ಸ್ಪರ್ಧೆಯಲ್ಲಿದ್ದರು. ಸೋಮಣ್ಣ 7 ಮತಗಳನ್ನು ಪಡೆದು ಜಯಶಾಲಿಯಾದರೆ, ಕಿಶೋರ್ 5 ಮತಗಳನ್ನು ಗಳಿಸಿ ಸೋಲು ಅನುಭವಿಸಿದರು.
ನೂತನ ತಹಶೀಲ್ದಾರ್ ಪ್ರವೀಣ್ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು. ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಗ್ರಾ.ಪಂ ಸದಸ್ಯರಾದ ಬಿಂದು, ಬಷೀರ್ ಕೆ.ಎಂ ಸೇರಿದಂತೆ ಪಕ್ಷದ ಪ್ರಮುಖರು ನೂತನ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರನ್ನು ಅಭಿನಂದಿಸಿ ಸಂಭ್ರಮಿಸಿದರು.