ಕೊಡಗು: ಜ್ವರದಿಂದ ಯುವಕ ಮೃತ್ಯು
► ಇಲಿಜ್ವರ ಶಂಕೆ; ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
ಲಿಬೀನ್ -ಮೃತ ಯುವಕ
ಮಡಿಕೇರಿ ಜು.4 : ಕೊಡಗು ಜಿಲ್ಲೆಯ ಗಡಿ ಗ್ರಾಮ ಕರಿಕೆಯ ಅನಪಾರೆ ಗ್ರಾಮದ ನಿವಾಸಿ ಲಿಬೀನ್ (25) ಜ್ವರದಿಂದ ಮೃತಪಟ್ಟಿದ್ದು, ಇಲಿಜ್ವರದ ಶಂಕೆ ವ್ಯಕ್ತವಾಗಿದೆ. ಆದರೆ ಇಲಿಜ್ವರದ ಕುರಿತು ಖಾತ್ರಿಯಾಗಿಲ್ಲವೆಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಸ್ಪಷ್ಟಪಡಿಸಿದ್ದಾರೆ.
ಕರಿಕೆಯ ಬಾಲನ್ ಹಾಗೂ ಲತಾ ದಂಪತಿಯ ಪುತ್ರ ಲಿಬೀನ್ ಪಕ್ಕದ ರಾಜ್ಯ ಕೇರಳಕ್ಕೆ ಕೆಲಸಕ್ಕೆಂದು ಪ್ರತಿದಿನ ಹೋಗಿ ಬರುತ್ತಿದ್ದ, ಇತ್ತೀಚೆಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಕೇರಳದ ಪರಿಯಾರಮ್ ಮೆಡಿಕಲ್ ಕಾಲೇಜ್ ನಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು ಎಂದು ತಿಳಿದು ಬಂದಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಜು.3 ರಂದು ಲಿಬೀನ್ ಮೃತಪಟ್ಟಿದ್ದರು ಎಂದು ತಿಳಿದು ಬಂದಿದೆ.
ಇಲಿಜ್ವರ ಸಾವಿಗೆ ಕಾರಣ ಎನ್ನುವ ಸುದ್ದಿ ಹಬ್ಬಿದ ಹಿನ್ನೆಲೆ ಆರೋಗ್ಯಾಧಿಕಾರಿಗಳು ಕರಿಕೆಯ ಲಿಬೀನ್ ನಿವಾಸಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆದರೆ ಮನೆಯವರಿಗೆ ಹಾಗೂ ಅಕ್ಕಪಕ್ಕದ ನಿವಾಸಿಗಳಿಗೆ ಯಾವುದೇ ಜ್ವರದ ಲಕ್ಷಣ ಕಂಡು ಬಂದಿಲ್ಲ ಎಂದು ಡಾ.ಕೆ.ಎಂ.ಸತೀಶ್ ಕುಮಾರ್ ಪತ್ರಿಕೆಗೆ ತಿಳಿಸಿದ್ದಾರೆ.
ಕರಿಕೆ ಆರೋಗ್ಯ ಕೇಂದ್ರದಲ್ಲೂ ನಿಗಾ ವಹಿಸಲಾಗಿದೆ, ಈ ರೀತಿಯ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. ಆದರೆ ಅಗತ್ಯ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.