ಕೋಲಾರ: ಕಾಂಗ್ರೆಸ್ ಮುಖಂಡ ಶ್ರೀನಿವಾಸ್ ಕೊಲೆ ಪ್ರಕರಣ; ಆರು ಆರೋಪಿಗಳ ಪೈಕಿ ಮೂವರ ಬಂಧನ
ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳಿಗೆ ಫೈರಿಂಗ್
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಂಧಿತ ಆರೋಪಿಗಳು
ಕೋಲಾರ, ಅ.23 : ಶ್ರೀನಿವಾಸಪುರ ಕಾಂಗ್ರೆಸ್ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀನಿವಾಸ್ (ಕೌನ್ಸಿಲರ್ ಶ್ರೀನಿವಾಸ್ ) ಕೊಲೆ ಪ್ರಕರಣದ ಕೊಲೆ ಆರೋಪಿಗಳ ಮೇಲೆ ಪೊಲೀಸರ ಫೈರಿಂಗ್ ಮಾಡಿರುವ ಬಗ್ಗೆ ವರದಿಯಾಗಿದೆ.
ಪ್ರಮುಖ ಆರೋಪಿಗಳಾದ ವೇಣುಗೋಪಾಲ್, ಮನೀಂದ್ರ ಕಾಲಿಗೆ ಗುಂಡೇಟು ತಗುಲಿದ್ದು, ಮತ್ತೊಬ್ಬ ಆರೋಪಿ ಸಂತೋಷ್ ಗೂ ಗಾಯಗಳಾಗಿವೆ.
ಆರೋಪಿಗಳನ್ನು ಬಂಧಿಸಿ ಕರೆತರುವ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿಗಳ ಕಾಲಿಗೆ ಲಕ್ಷ್ಮೀಸಾಗರ ಅರಣ್ಯ ಪ್ರದೇಶದಲ್ಲಿ ಕೋಲಾರ ಜಿಲ್ಲೆ ವೇಮಗಲ್ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಆರ್.ವೆಂಕಟೇಶ್ ಫೈರಿಂಗ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಹಲ್ಲೆ ವೇಳೆ ಇನ್ಸ್ಪೆಕ್ಟರ್ ವೆಂಕಟೇಶ್, ಪೊಲೀಸ್ ಸಿಬ್ಬಂದಿ ಮಂಜುನಾಥ್ ಮತ್ತು ನಾಗೇಶ್ ಅವರಿಗೂ ಗಾಯಗಳಾಗಿದ್ದು, ಗಾಯಾಳುಗಳಿಗೆ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ರಾತ್ರಿ ಕೋಲಾರದ ಜಾಲಪ್ಪ ಆಸ್ಪತ್ರೆಗೆ ಆಗಮಿಸಿದ ಗೃಹ ಸಚಿವ ಡಿ.ಜಿ.ಪರಮೆಶ್ವರ್ , ಸುದ್ದಿಗಾರರೊಂದಿಗೆ ಮಾತನಾಡಿ, 24 ಗಂಟೆ ಒಳಗೆ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಹೇಳಿದ್ದರು.
ಇನ್ನೂ ಮೂರು ಜನ ಆರೋಪಿಗಳನ್ನು ಶೀಘ್ರವೇ ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.