ಕೋಲಾರ: ಮಾಲೂರು ಶಾಸಕ ಕೆ.ವೈ.ನಂಜೇಗೌಡ ಮನೆ ಮೇಲೆ ಈಡಿ ದಾಳಿ
ಕೋಲಾರ, ಜ. 08 : ಮಾಲೂರು ಶಾಸಕ ಕೆ.ವೈ.ನಂಜೇಗೌಡ ಅವರ ಮನೆ ಸಹಿತ ಮೂರು ಕಡೆ ಸೋಮವಾರ ಬೆಳಿಗ್ಗೆ ಈ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷರಾಗಿರುವ ಕೆ.ವೈ. ನಂಜೇಗೌಡ ಅವರ ಟೇಕಲ್ ಹೋಬಳಿಯ ಕೊಮ್ಮನಹಳ್ಳಿಯಲ್ಲಿರುವ ನಿವಾಸದ ಮೇಲೆ ದಾಳಿ ನಡೆಸಿದ ಈಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಹುತ್ತೂರು ಹೋಬಳಿಯಲ್ಲಿರುವ ಕೋಚಿಮುಲ್ ನಲ್ಲಿ (ಕೋಲಾರ ಚಿಕ್ಕಬಳ್ಳಾಪುರ ಮಿಲ್ಕ್ ಯೂನಿಯನ್ ಲಿಮಿಟೆಡ್) ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ನಂಜೇಗೌಡರ ಆಪ್ತ ಸಹಾಯಕ ಹರೀಶ್, ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಗೋಪಾಲಮೂರ್ತಿ, ಕೋಚಿಮುಲ್ ಅಡ್ಮಿನ್ ನಾಗೇಶ್ ಸೇರಿದಂತೆ ಒಟ್ಟು 10ಕ್ಕೂ ಹೆಚ್ಚು ಮಂದಿಯ ನಿವಾಸಗಳ ಮೇಲೆ ದಾಳಿ ನಡೆದಿದೆ.
ಕೊಮ್ಮನಹಳ್ಳಿಯಲ್ಲಿರುವ ನಂಜೇಗೌಡ ಅವರ ನಂಜುಂಡೇಶ್ವರ ಸ್ಟೋನ್ ಕ್ರಷರ್ ನಲ್ಲಿ ದಾಖಲೆಗಳ ಪರಿಶೀಲನೆ ಮಾಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಬೆಂಗಳೂರು ರಾಮಮೂರ್ತಿ ನಗರದಲ್ಲಿರುವ ಕೋಚಿಮುಲ್ ನ ಎಂ.ಡಿ. ಗೋಪಾಲಮೂರ್ತಿ ನಿವಾಸದ ಮೇಲೂ ಈಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ
ಕೋಚಿಮುಲ್ ಗೆ ಕಳೆದ ಡಿಸೆಂಬರ್ ತಿಂಗಳಲ್ಲಿ ನಡೆದ 75 ವಿವಿಧ ಹುದ್ದೆಗಳ ನೇಮಕಾತಿ ವಿಚಾರದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರ ನಡೆದಿರುವ ಅರೋಪದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ ಎನ್ನಲಾಗುತ್ತಿದೆ.
ಕೋಚಿಮುಲ್ ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ನಿರೀಕ್ಷೆಯಲ್ಲಿದ್ದ ನಂಜೇಗೌಡ, ಎರಡನೇ ಅವಧಿಗೆ ಸಚಿವ ಸ್ಥಾನಕ್ಕೆ ಜಿಲ್ಲೆಯ ಪ್ರಮುಖ ಆಕಾಂಕ್ಷಿಯಾಗಿದ್ದರು ಎಂದು ತಿಳಿದು ಬಂದಿದೆ.