ಕೊಲ್ಲೂರು: ಕೋವಿಯಿಂದ ಶೂಟ್ ಮಾಡಿ 4 ದನಗಳ ಹತ್ಯೆ; ಆರೋಪಿ ನರಸಿಂಹ ವಿರುದ್ಧ ಪ್ರಕರಣ ದಾಖಲು
15 ದನಗಳಿಗೆ ಗಾಯ
ಕೊಲ್ಲೂರು, ಸೆ.29: ಬೆಳ್ಳಾಲ ಗ್ರಾಮದ ಅಂಗಡಿ ಜೆಡ್ಡು ಎಂಬಲ್ಲಿ ಕಳೆದ ಒಂದು ತಿಂಗಳ ಅವಧಿಯಲ್ಲಿ ಕೋವಿಯಿಂದ ಶೂಟ್ ಮಾಡಿ ನಾಲ್ಕು ದನಗಳನ್ನು ಹತ್ಯೆಗೈದು, 10-15 ದನಗಳಿಗೆ ಗಾಯಗೊಳಿಸಿರುವ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೇಯಲು ಬಿಟ್ಟಿದ್ದ ಅಂಗಡಿಜೆಡ್ಡುವಿನ ಗುಲಾಬಿ ಎಂಬ ಮಹಿಳೆಯ ಹಾಗೂ ಇತರರ ದನಗಳಿಗೆ ಸ್ಥಳೀಯ ನಿವಾಸಿ ನರಸಿಂಹ ಎಂಬಾತ ಸೆ.23ರಂದು ಕೋವಿಯಿಂದ ಶೂಟ್ ಮಾಡಿದ್ದು, ಇದರ ಪರಿಣಾಮ ಗಾಯಗೊಂಡ ದನಗಳು ಸಾವನಪ್ಪಿವೆ. ಇದನ್ನು ಪ್ರಶ್ನಿಸಿದ ಗುಲಾಬಿ ಅವರಿಗೆ ಆರೋಪಿ ಅವಾಚ್ಯವಾಗಿ ಬೈದು ಕೋವಿಯಿಂದ ಹೊಡೆದು ಶೂಟ್ ಮಾಡುವುದಾಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.
ಸುಮಾರು ಒಂದು ತಿಂಗಳಿನಿಂದ ಅಂಗಡಿಜೆಡ್ಡು ಪರಿಸರದಲ್ಲಿ 3 ದನಗಳು ಸತ್ತಿದ್ದು, 10-15 ದನಗಳು ಗಾಯಗೊಂಡು ಹುಳವಾಗಿದೆ. ಇದಕ್ಕೆಲ್ಲಾ ನರಸಿಂಹ ಎಂಬಾತನೇ ಕಾರಣವಾಗಿದ್ದು, ಈತನಲ್ಲಿ ಸ್ಥಳೀಯರು ವಿಚಾರಿಸಿದಾಗ ಈಗಾಗಲೇ 4 ದನವನ್ನು ಕೊಂದ್ದಿದ್ದು 10-15 ದನಗಳಿಗೆ ಕೋವಿಯಿಂದ ಹೊಡೆದಿದ್ದೇನೆ. ಇನ್ನು ಮುಂದಕ್ಕೆ ದನಗಳನ್ನು ಜಾಗ್ರತೆ ಮಾಡದೇ ಇದ್ದರೆ ದನಕ್ಕೆ ಆದ ಗತಿ ನಿಮಗೂ ಬರುತ್ತದೆ ಎಂದು ಜೀವ ಬೆದರಿಕೆ ಹಾಕಿರುವುದಾಗಿ ಗುಲಾಬಿ ಅವರು ನೀಡಿದ ದೂರಿನಲ್ಲಿ ತಿಳಿಸಲಾಗಿದೆ.