ಕೊಪ್ಪ: ವೈದ್ಯ ಆತ್ಮಹತ್ಯೆಗೆ ಯತ್ನ
ಸಾಂದರ್ಭಿಕ ಚಿತ್ರ
ಚಿಕ್ಕಮಗಳೂರು, ಆ.29: ವೈಯಕ್ತಿ ಕಾರಣ ಹಾಗೂ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿಯ ನೋಟಿಸ್ನಿಂದ ಬೇಸತ್ತ ಪ್ರಸೂತಿ ತಜ್ಞ ವೈದ್ಯರೊಬ್ಬರು ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಮಂಗಳವಾರ ಜಿಲ್ಲೆಯ ಬಾಳೆಹೊನ್ನೂರು ಪಟ್ಟಣದಲ್ಲಿ ವರದಿಯಾಗಿದೆ.
ಕೊಪ್ಪ ಸರಕಾರಿ ತಾಲೂಕು ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಾಗಿ ಕರ್ತವ್ಯದಲ್ಲಿದ್ದ ವೈದ್ಯ ಡಾ.ಸಂದೀಪ್ ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರು ಪಟ್ಟಣದಲ್ಲಿರುವ ತನ್ನ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದು, ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿದ್ದ ವೈದ್ಯನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ವೈದ್ಯ ಡಾ.ಸಂದೀಪ್ ಕರ್ತವ್ಯದ ವೇಳೆಯಲ್ಲೂ ಮದ್ಯಪಾನ ಮಾಡಿಕೊಂಡಿರುತ್ತಿದ್ದರು ಎಂಬ ಆರೋಪಿಸಲಾಗಿದೆ. ಮದ್ಯಪಾನ ವ್ಯಸನಿಯಾಗಿದ್ದ ಡಾ.ಸಂದೀಪ್ ಪದೇಪದೇ ಕರ್ತವ್ಯಕ್ಕೆ ಗೈರಾಗುತ್ತಿದ್ದರು. ಈ ಕಾರಣಕ್ಕೆ ಕೊಪ್ಪ ತಾಲೂಕು ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಗಾನವಿ ಅವರು ಡಾ.ಸಂದೀಪ್ ಅವರಿಗೆ ಹಲವು ಬಾರಿ ನೋಟಿಸ್ ನೀಡಿದ್ದರೆಂದು ತಿಳಿದು ಬಂದಿದೆ. ಈ ಮಧ್ಯೆ ಡಾ.ಸಂದೀಪ್ ವೈಯಕ್ತಿ ಕಾರಣದಿಂದ ಮಾನಸಿಕವಾಗಿ ನೊಂದಿದ್ದರು ಎಂದು ತಿಳಿದು ಬಂದಿದ್ದು, ಇದರಿಂದ ಬೇಸತ್ತ ಅವರು ಮಂಗಳವಾರ ಬೆಳಗ್ಗೆ ಬಾಳೆಹೊನ್ನೂರಿನಲ್ಲಿರುವ ತಮ್ಮ ಮನೆಯಲ್ಲಿ ನಿದ್ದೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆಂದು ತಿಳಿದು ಬಂದಿದೆ.
ಸದ್ಯ ಶಿವಮೊಗ್ಗ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೈದ್ಯ ಡಾ.ಸಂದೀಪ್ ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ತಿಳಿದು ಬಂದಿದೆ.