ಕೊಪ್ಪ | ವಸತಿ ನಿಲಯದಲ್ಲಿ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಕ್ಕೆ ತಿರುವು: ಡೆತ್ನೋಟ್ ಪತ್ತೆ
750 ರೂ. ಸಾಲಕ್ಕೆ ಪ್ರಾಣ ಕಳೆದುಕೊಂಡ ವಿದ್ಯಾರ್ಥಿ?
ಶ್ರೀನಿವಾಸ್- ಮೃತ ವಿದ್ಯಾರ್ಥಿ
ಚಿಕ್ಕಮಗಳೂರು, ಆ.28: ಜಿಲ್ಲೆಯ ಕೊಪ್ಪ ಪಟ್ಟಣದಲ್ಲಿರುವ ಬಿಜಿಎಸ್ ವಸತಿ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣ ತಿರುವು ಪಡೆದುಕೊಂಡಿದ್ದು, ಹಾಸ್ಟೆಲ್ ಸಿಬ್ಬಂದಿ ನೀಡಿದ್ದ ಸಾಲ ಹಿಂದಿರುಗಿಸುವಂತೆ ಸಿಬ್ಬಂದಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವಿದ್ಯಾರ್ಥಿ ಡೆತ್ನೋಟ್ನಲ್ಲಿ ಬರೆದಿರುವುದು ಬೆಳಕಿಗೆ ಬಂದಿದೆ.
ಕಳೆದ ಆ.22ರಂದು ರಾತ್ರಿ ಬಿಜಿಎಸ್ ವಸತಿ ನಿಲಯದಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ಕಡೂರು ಮೂಲದ ವಿದ್ಯಾರ್ಥಿ ಶ್ರೀನಿವಾಸ್ ವಸತಿ ನಿಲಯದ ಕೊಠಡಿಯಲ್ಲಿ ನೇಣುಬಿಗಿದು ಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿದ್ಯಾರ್ಥಿ ಸಾವಿಗೆ ಕಾರಣ ಏನೆಂದು ತಿಳಿದು ಬಂದಿರಲಿಲ್ಲ.
ಸೋಮವಾರ ವಿದ್ಯಾರ್ಥಿ ಬರೆದಿದ್ದ ಡೆತ್ನೋಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ʼʼತಾನು ಹಾಸ್ಟೆಲ್ ಸಿಬ್ಬಂದಿಯಿಂದ 750 ರೂ. ಹಣ ಸಾಲ ಪಡೆದಿದ್ದು, ಸಿಬ್ಬಂದಿ 3000 ಸಾವಿರ ಹಣ ಕೇಳುತ್ತಿದ್ದರೆಂದುʼʼ ಡೆತ್ನೋಟ್ನಲ್ಲಿ ವಿದ್ಯಾರ್ಥಿ ಬರೆದಿದ್ದಾನೆನ್ನಲಾಗಿದೆ.
ವಿದ್ಯಾರ್ಥಿ ಶ್ರೀನಿವಾಸ್ ಆತ್ಮಹತ್ಯೆಗೆ ವಸತಿ ನಿಲಯದ ಸಿಬ್ಬಂದಿ ಕೈವಾಡ ಇರುವ ಬಗ್ಗೆ ವಿದ್ಯಾರ್ಥಿ ಪೋಷಕರು ಶಂಕೆ ವ್ಯಕ್ತಪಡಿಸಿದ್ದು, ಹಾಸ್ಟೆಲ್ ಸಿಬ್ಬಂದಿ ವಿದ್ಯಾರ್ಥಿಗೆ ಹಣ ನೀಡಿದ್ದು ಏಕೆ?, ವಿದ್ಯಾರ್ಥಿಗೆ ನೇಣು ಹಾಕಿಕೊಳ್ಳಲು ಹಾಸ್ಟೆಲ್ನಲ್ಲಿ ಸೀರೆ ಸಿಕ್ಕಿದ್ದು ಹೇಗೆ?, ಶ್ರೀನಿವಾಸ್ ಆತ್ಮಹತ್ಯೆ ವಿಚಾರ ಅಂದು ಬೆಳಗ್ಗೆ 5ಕ್ಕೆ ಗೊತ್ತಾದರೂ 2 ಗಂಟೆ ನಂತರ ಪೋಷಕರಿಗೆ ತಿಳಿಸಿದ್ದು ಏಕೆ? ಎಂದು ಪೋಷಕರು ಪ್ರಶ್ನಿಸಿದ್ದು, ತನ್ನ ಮಗನ ಸಾವಿಗೆ ನ್ಯಾಯ ಕೊಡಿಸಬೇಕು ಎಂದು ವಿದ್ಯಾರ್ಥಿ ತಂದೆ ರಮೇಶಪ್ಪ ಆಗ್ರಹಿಸಿದ್ದಾರೆ.