ಕೆಪಿಎಸ್‍ಸಿ | ಸೆ.14,15 ನಡೆಯಲಿದ್ದ ಸ್ಪರ್ಧಾತ್ಮಕ ಪರೀಕ್ಷೆ ಮುಂದೂಡಿಕೆ
ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು(ಕೆಪಿಎಸ್‍ಸಿ) ನಾಳೆ(ಸೆ.14) ಕನ್ನಡ ಭಾಷಾ ಪರೀಕ್ಷೆ ಮತ್ತು ನಾಡಿದ್ದು(ಸೆ.15) ನಡೆಸಲು ಉದ್ದೇಶಿಸಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದ್ದು, ಸರಕಾರದ ಆದೇಶದಂತೆ ಹುದ್ದೆಗಳಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಕಾಲಾವಾಕಾಶ ನೀಡಲಾಗುವುದು ಎಂದು ಕೆಪಿಎಸ್‍ಸಿ ತಿಳಿಸಿದೆ.
ಶುಕ್ರವಾರ ಆಯೋಗವು ಪ್ರಕಟನೆ ಹೊರಡಿಸಿದ್ದು, ವಿವಿಧ ಗ್ರೂಪ್ ಬಿ ಹುದ್ದೆಗಳಿಗೆ ಸೆ.14 ಮತ್ತು ಸೆ.15ರಂದು ಕನ್ನಡ ಭಾಷಾ ಪರೀಕ್ಷೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸಲು ನಿರ್ಧರಿಸಿ ಅಭ್ಯರ್ಥಿಗಳನ್ನು ಪರೀಕ್ಷಾ ಉಪ ಕೇಂದ್ರಗಳಿಗೆ ಹಂಚಿಕೆ ಮಾಡಲಾಗಿತ್ತು. ಆದರೆ ಈಗ ಪರೀಕ್ಷೆಯನ್ನು ಮುಂಡೂದಲಾಗಿದೆ ಎಂದಿದೆ.
ವಿವಿಧ ಇಲಾಖೆಗಳ ಗ್ರೂಪ್ ಬಿ ಮತ್ತು ಸಿ ಹುದ್ದೆಗಳಿಗೆ ನೇರ ನೇಮಕಾತಿ ಮೂಲಕ ಭರ್ತಿ ಮಾಡಲು ಈಗಾಗಲೇ ಹೊರಡಿಸಿದ ಹಾಗೂ ಮುಂದಿನ ಒಂದು ವರ್ಷದಲ್ಲಿ ಹೊರಡಿಸಲಿರುವ ಅಧಿಸೂಚನೆಗಳಿಗೆ ಸಂಬಂಧಿಸಿದಂತೆ ಎಲ್ಲ ಪ್ರವರ್ಗಗಳ ಅಭ್ಯರ್ಥಿಗಳಿಗೆ ಒಂದು ಬಾರಿ ಅನ್ವಯವಾಗುವಂತೆ ಗರಿಷ್ಟ ವಯೋಮಿತಿಯಲ್ಲಿ 3 ವರ್ಷಗಳ ಸಡಿಲಿಕೆ ನೀಡಿ ಆದೇಶಿಸಿದೆ. ಅದರಂತೆ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆ ಮುಕ್ತಾಯದ ನಂತರ ಪರಿಷ್ಕೃತ ಪರೀಕ್ಷಾ ದಿನಾಂಕಗಳನ್ನು ತಿಳಿಸಲಾಗುವುದು ಎಂದು ಹೇಳಿದೆ.