ಶ್ರೀಮಂತರ ಸಾಲಮನ್ನಾ ಮಾಡಿದರೆ ಆರ್ಥಿಕ ಅಭಿವೃದ್ಧಿ, ಬಡವರಿಗೆ ಕೊಟ್ಟರೆ ಅದು ಪುಕ್ಕಟ್ಟೆಯೇ?: ಕೃಷ್ಣ ಭೈರೇಗೌಡ ಆಕ್ರೋಶ
''ಶಕ್ತಿ ಯೋಜನೆಯಿಂದ ಸಾರಿಗೆ ನಿಯಮಗಳಲ್ಲಿ ಮೌನಕ್ರಾಂತಿ ನಡೆಯುತ್ತಿದೆ''
ಬೆಂಗಳೂರು, ಜು.12: ‘ಶ್ರೀಮಂತರ ತೆರಿಗೆ ಕಡಿತ ಮತ್ತು ಕಾರ್ಪೊರೇಟ್ ಸಾಲಮನ್ನಾ ಮಾಡಿದರೆ ಆರ್ಥಿಕ ಅಭಿವೃದ್ಧಿಯಾಗುತ್ತದೆ. ಅದೇ ಬಡವರಿಗೆ ಯೋಜನೆಗಳನ್ನು ಕೊಟ್ಟರೆ ಪುಕ್ಕಟ್ಟೆಯೇ? ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅಸಮಾಧಾನ ಹೊರಹಾಕಿದರು.
ಬುಧವಾರ ಪರಿಷತ್ ಕಲಾಪದಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಸಿದ ಬಿಜೆಪಿ ಸದಸ್ಯೆ ಭಾರತಿ ಶೆಟ್ಟಿ, ‘ಶಕ್ತಿ ಯೋಜನೆ ಒಂದು ಪುಕ್ಕಟ್ಟೆ ಭಾಗ್ಯ. ಪುಕ್ಕಟ್ಟೆ ಇದೆ ಎಂದು ಜನ ಈಗ ಸಾರಿಗೆ ಬಸ್‍ನಲ್ಲಿ ಓಡಾಡಲು ಮುಗಿಬಿದ್ದಿದ್ದಾರೆ. ಆದರೆ, ಪರಿಸ್ಥಿತಿ ಯಾವಾಗಲೂ ಹೀಗೆ ಇರಲ್ಲ ಎಂದು ಹೀಯಾಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕೇಂದ್ರ ಬಿಜೆಪಿ ಸರಕಾರ ಕಳೆದ ವರ್ಷ 2ಲಕ್ಷ ಕೋಟಿ ರೂ. ಕಾರ್ಪೊರೇಟ್ ಸಾಲಮನ್ನಾ ಮಾಡಿದೆ. ಶ್ರೀಮಂತ ತೆರಿಗೆಯನ್ನು ಶೇ.30ರಿಂದ ಶೇ.22ಕ್ಕೆ ಇಳಿಸಲಾಗಿದೆ. ನಿಮ್ಮ ಪ್ರಕಾರ ಶ್ರೀಮಂತರಿಗೆ ಕೊಟ್ಟರೆ ಆರ್ಥಿಕ ಅಭಿವೃದ್ಧಿ, ಬಡವರಿಗೆ ಕೊಟ್ಟರೆ ಪುಕ್ಕಟ್ಟೆ ಎಂದು ಹೀಯಾಳಿಸುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಶ್ರೀಮಂತರ ಬಗ್ಗೆ ಇರುವ ಬಿಜೆಪಿ ನಾಯಕರ ಮಮಕಾರ ಬಡವರ ಮೇಲೆ ಏಕಿಲ್ಲ? ಬಡವರೆಂದರೆ ನಿಮಗೆ ಏಕಿಷ್ಟು ಅಸಡ್ಡೆ? ಹೊಟ್ಟೆ ತುಂಬಿದ ಜನ ಬಡವರ ಬಗ್ಗೆ ಹೀಗೆ ಅವಹೇಳನ ಮಾಡುವುದು ಹೊಸದಲ್ಲ ಬಿಡಿ ಎಂದು ಸಚಿವರು ಹೇಳಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಭಾಪತಿ ಪೀಠದಲ್ಲಿದ್ದ ತೇಜಸ್ವಿನಿ ಗೌಡ, ಜನಪರ ಕಾರ್ಯಕ್ರಮದ ಬಗ್ಗೆ ಹೀಯಾಳಿಸುವುದು ಸರಿಯಲ್ಲ. ಸದನದಲ್ಲಿ ಸದಸ್ಯರು ಪುಕ್ಕಟ್ಟೆ ಪದ ಪ್ರಯೋಗ ಮಾಡುವ ಅಗತ್ಯ ಇಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
‘ಶಕ್ತಿ’ ಯೋಜನೆಯಿಂದ ಮೌನಕ್ರಾಂತಿ: ‘ಸರಕಾರದ ಶಕ್ತಿ ಯೋಜನೆಯಿಂದ ಸಾರಿಗೆ ನಿಯಮಗಳಲ್ಲಿ ಮೌನಕ್ರಾಂತಿ ನಡೆಯುತ್ತಿದೆ. ಸಾರಿಗೆ ನಿಗಮಗಳು ಲಾಭದ ಕಡೆಗೆ ಮುಖ ಮಾಡಿವೆ. ಇಷ್ಟು ದಿನಗಳಿಂದ ನಷ್ಟದಲ್ಲಿದ್ದ ನಿಗಮಗಳು ಈಗ ಸರಕಾರದ ಅನುದಾನಕ್ಕೆ ಕಾಯದೆ ಸ್ವಂತ ಬಲದ ಮೇಲೆ ನಿಲ್ಲುವಂತಾಗಿದೆ. ಈ ಯೋಜನೆಯಿಂದ ಪ್ರವಾಸೋದ್ಯಮ ವೃದ್ದಿ, ಉದ್ಯೋಗ ಸೃಷ್ಟಿಯಾಗಿದ್ದು ಆರ್ಥಿಕಾಭಿವೃದ್ಧಿಗೂ ಕಾರಣವಾಗಿದೆ’
-ಕೃಷ್ಣ ಭೈರೇಗೌಡ, ಕಂದಾಯ ಸಚಿವ