ಕಾವೇರಿ 2.0 ತಂತ್ರಾಂಶದಿಂದ ಆಸ್ತಿ ನೋಂದಣಿ ಕಾರ್ಯಕ್ಕೆ ವೇಗ : ಕೃಷ್ಣ ಬೈರೇಗೌಡ

ಬೆಂಗಳೂರು : ರಾಜ್ಯದಲ್ಲಿ ಕಾವೇರಿ 2.0 ತಂತ್ರಾಂಶ ಚಾಲನೆಗೆ ಬಂದ ನಂತರ ಆಸ್ತಿ ನೋಂದಣಿ ಕಾರ್ಯಕ್ಕೆ ವೇಗ ದೊರೆತಿದ್ದು, ಪ್ರಸ್ತುತ ಕಾಲಮಾನದಲ್ಲಿ ಸಾಫ್ಟ್‍ವೇರ್ ಗೆ ಸಂಬಂಧಿಸಿದಂತೆ ಉದ್ಭವಿಸುವ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
ಬುಧವಾರ ವಿಧಾನ ಪರಿಷತ್‍ನ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಕೆ.ಪ್ರತಾಪ ಸಿಂಹ ನಾಯಕ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, 2025ನೇ ಸಾಲಿನ ಆರಂಭದಲ್ಲಿ ಕಾವೇರಿ 2.0 ತಂತ್ರಾಂಶದಲ್ಲಿ ಉಂಟಾಗಿದ್ದ ತಾಂತ್ರಿಕ ದೋಷದಿಂದ ಸೇವೆಯಲ್ಲಿ ವ್ಯತ್ಯಯವಾಗಿತ್ತು, ಸರಕಾರ ತುರ್ತಾಗಿ ಆ ಸಮಸ್ಯೆಯನ್ನು ಪರಿಹರಿಸಿದ್ದು, ಪ್ರಸ್ತುತ ಯಾವುದೇ ಸಮಸ್ಯೆಗಳಿಲ್ಲದೆ ಕಾರ್ಯನಿರ್ವಹಿಸುತ್ತಿದೆ ಎಂದರು.
ತಂತ್ರಾಂಶವನ್ನು ಬಳಸುವ ಸಾರ್ವಜನಿಕರು ಹಾಗೂ ಅಧಿಕಾರಿಗಳು ನೀಡುವ ಸಲಹೆಗಳನ್ನು ಸಹ ಪರಿಗಣನೆಗೆ ತೆಗೆದುಕೊಂಡು ತಂತ್ರಾಂಶವನ್ನು ಮತ್ತಷ್ಟು ಬಳಕೆದಾರರ ಸ್ನೇಹಮಯಿಯನ್ನಾಗಿಸಲು ಪ್ರಯತ್ನಿಸಲಾಗುತ್ತಿದೆ. ತಂತ್ರಾಂಶದ ಬಳಕೆ ಸುಲಭವಾಗಿ ಅರ್ಥವಾಗಲು ಸಹಾಯವಾಗುವಂತೆ ಸಹಾಯವಾಣಿ, ಟಿಕೆಟಿಂಗ್ ಟೂಲ್, ಸರ್ವೀಸ್ ಡೆಸ್ಕ್, ಅಪ್ಲಿಕೇಷನ್ ಸಪೋರ್ಟ್ ಇಂಜಿನಿಯರ್ ಹಾಗೂ ಸಿಸ್ಟಂ ಅಡ್ಮಿನ್, ಕಾವೇರಿ ಯೋಜನಾ ಉಸ್ತುವಾರಿ ಘಟಕ, ಸಿಎಸ್‍ಜಿಯಲ್ಲಿನ ಎಲ್2 ಸಾಫ್ಟ್ ವೇರ್ ವ್ಯವಸ್ಥೆ, ಯೂಟ್ಯೂಬ್ ಚಾನೆಲ್, ಪೋಸ್ಟರ್ ಹಾಗೂ ತರಬೇತಿಗಳನ್ನು ಸಹ ಹಮ್ಮಿಕೊಳ್ಳಲಾಗುತ್ತಿದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.
ಕಾವೇರಿ-2.0 ತಂತ್ರಾಂಶವು ನೂತನ ತಂತ್ರಾಂಶವಾಗಿದ್ದು, ಇದನ್ನು ಜೂನ್-2023 ರ ಅಂತ್ಯಕ್ಕೆ ರಾಜ್ಯದ ಎಲ್ಲಾ ಉಪನೋಂದಣಿ ಕಚೇರಿಗಳಲ್ಲಿ ಅಳವಡಿಸಲಾಗಿರುತ್ತದೆ. ಈ ತಂತ್ರಾಂಶದಲ್ಲಿ ಪಬ್ಲಿಕ್ ಇಂಟರ್ ಫೇಸ್ ಇರುವುದರಿಂದ ಸಾರ್ವಜನಿಕರು ಆನ್‍ಲೈನ್ ಮುಖಾಂತರ ದಸ್ತಾವೇಜಿನ ನೋಂದಣಿಗೆ ಸಂಬಂಧಿಸಿದ ಶೇ.90ರಷ್ಟು ಕೆಲಸವನ್ನು ಪೂರ್ಣಗೊಳಿಸಿರುತ್ತಾರೆ. ತಂತ್ರಾಂಶದ ಕಾರ್ಯಾಚರಣೆಯಲ್ಲಿ ಸಾರ್ವಜನಿಕರ ಪಾತ್ರ ಹೆಚ್ಚಾಗಿರುವುದರಿಂದ ಪ್ರಾರಂಭದ ದಿನಗಳಲ್ಲಿ ತಂತ್ರಾಂಶವನ್ನು ಉಪಯೋಗಿಸುವಲ್ಲಿ ಸಾರ್ವಜನಿಕರಿಗೆ ಕೆಲವು ಸಮಸ್ಯೆಗಳು ಕಂಡು ಬಂದಿದ್ದು, ಅವುಗಳನ್ನು ಕಾಲಕ್ರಮೇಣ ಪರಿಹರಿಸಲಾಗಿರುತ್ತದೆ ಎಂದು ಕೃಷ್ಣ ಬೈರೇಗೌಡ ಹೇಳಿದರು.