ಈಡಿ-ಸಿಬಿಐ ಬಳಸಿ ರಾಜ್ಯ ಸರಕಾರವನ್ನು ಅಸ್ಥಿರಗೊಳಿಸುವ ಕೇಂದ್ರದ ಬೆದರಿಕೆಗೆ ನಾವು ಬಗ್ಗುವುದಿಲ್ಲ : ಕೃಷ್ಣಬೈರೇಗೌಡ
"ವಾಲ್ಮೀಕಿ ನಿಗಮ ಹಗರಣದಲ್ಲಿ ʼಈಡಿʼ ಗೆ ತಪ್ಪಿತಸ್ಥರ ಹುಡುಕುವ ಉದ್ದೇಶ ಇಲ್ಲ"
ಕೃಷ್ಣಬೈರೇಗೌಡ
ಬೆಂಗಳೂರು : ಕೇಂದ್ರ ಬಿಜೆಪಿ ಸರಕಾರ ಜಾರಿ ನಿರ್ದೇಶನಾಲಯವನ್ನು (ಈಡಿ) ಬಳಸಿಕೊಂಡು ರಾಜ್ಯ ಕಾಂಗ್ರೆಸ್ ಸರಕಾರವನ್ನು ಅಸ್ಥಿರಗೊಳಿಸುವ ಪ್ರಜಾಪ್ರಭುತ್ವ ವಿರೋಧಿ ಕೆಲಸಕ್ಕೆ ಮುಂದಾಗಿದೆ. ಆದರೆ, ಇಂತಹ ಗೊಡ್ಡು ಹೆದರಿಕೆ-ಬೆದರಿಕೆಗಳಿಗೆ ಬಗ್ಗುವ ಮಾತೇ ಇಲ್ಲ ಎಂದು ಸಚಿವ ಕೃಷ್ಣಬೈರೇಗೌಡ ಅವರು ತಿಳಿಸಿದರು.
ಗುರುವಾರ ವಿಧಾನಸೌಧದ ಸಮ್ಮೇಳನಾ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕೇಂದ್ರ ಬಿಜೆಪಿ ಸರಕಾರದ ಪ್ರಜಾಪ್ರಭುತ್ವ ವಿರೋಧಿ ನಡೆಯ ವಿರುದ್ಧ ಛೀಮಾರಿ ಹಾಕಿದ ಅವರು,“ ವಾಲ್ಮೀಕಿ ನಿಗಮದ ಹಗರಣ ಪ್ರಕರಣವನ್ನು ತನಿಖೆ ನಡೆಸುತ್ತಿರುವ ಈಡಿ ಅಧಿಕಾರಿಗಳು ವಿಚಾರಣೆಗೊಳಪಟ್ಟವರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆ. ಈ ಹಗರಣದಲ್ಲಿ ಉನ್ನತ ಮಟ್ಟದಲ್ಲಿರುವವರೂ ಸಹ ಭಾಗಿಯಾಗಿದ್ದಾರೆ ಎಂದು ಹೇಳಿಕೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ” ಎಂದು ಆರೋಪಿಸಿದರು.
ಹಗರಣದಲ್ಲಿ ಸಿಎಂ-ಡಿಸಿಎಂ ಸಹ ಭಾಗಿಯಾಗಿದ್ದಾರೆ ಎಂದು ತಪ್ಪೊಪ್ಪಿಗೆ ನೀಡಿ, ಇಲ್ಲದಿದ್ದರೆ ನಿಮಗೆ ಈಡಿ ಪವರ್ ಗೊತ್ತಿಲ್ಲ. ಆಮೇಲೆ ನೀವು ಕಷ್ಟಕ್ಕೆ ಸಿಲುಕುತ್ತೀರಿ ಎಂದು ವಿಚಾರಣೆ ವೇಳೆ ಹೆದರಿಸುವ ಮೂಲಕ ಈಡಿ ಅಧಿಕಾರಿಗಳು ತನಿಖೆಯನ್ನೇ ತಪ್ಪುದಾರಿಗೆ ಕೊಂಡೊಯ್ಯುತ್ತಿದ್ದಾರೆ. ಈಡಿ ಅಧಿಕಾರಿಗಳ ಜೊತೆ ರಾಜಿ ಸಂಧಾನ ಮಾಡಿಕೊಂಡು ಅವರು ಹೇಳಿದ್ದನ್ನು ಕೇಳಿಕೊಂಡು ಇರುವವರಿಗೆ ಅಭಯ ನೀಡುತ್ತಿದ್ದಾರೆ. ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಪ್ರಜಾಪ್ರಭುತ್ವದ ಅಡಿಯಲ್ಲಿ ಚುನಾಯಿತಗೊಂಡಿರುವ ಸರಕಾರವನ್ನೇ ಬುಡಮೇಲು ಮಾಡುವ ಕೆಲಸಕ್ಕೆ ಮುಂದಾಗಿದ್ದಾರೆ” ಎಂದು ಆಕ್ರೋಶ ಹೊರಹಾಕಿದರು.
ವಾಮಮಾರ್ಗದಲ್ಲಿ ಮತ್ತೆ ಅಧಿಕಾರಕ್ಕೆ ಏರಲು ಯತ್ನಿಸುತ್ತಿದ್ದಾರೆ :
“ಜನ ಮನ್ನಣೆ ಹಾಗೂ ಅಧಿಕಾರ ಕಳೆದುಕೊಂಡು ರಾಜ್ಯದಲ್ಲಿ ದುರ್ಬಲವಾಗಿರು ಬಿಜೆಪಿ ನಾಯಕರು ಜಾರಿ ನಿರ್ದೇಶನಾಲಯವನ್ನು (ಈಡಿ) ಬಳಸಿಕೊಂಡು ವಾಮಮಾರ್ಗದಲ್ಲಿ ಮತ್ತೆ ಅಧಿಕಾರಕ್ಕೆ ಏರಲು ಯತ್ನಿಸುತ್ತಿದ್ದಾರೆ. ಆಪರೇಷನ್ ಕಮಲ ಸೇರಿದಂತೆ ಬಿಜೆಪಿಯ ಇಂತಹ ಜನ ವಿರೋಧಿ ಕಸರತ್ತುಗಳು ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ವಿಚಾರವೇನಲ್ಲ. ಈಡಿ, ಸಿಬಿಐ ಹಾಗೂ ಐಟಿಯನ್ನು ಸರ್ಜಿಕಲ್ ಸ್ಟ್ರೈಕ್ ತರ ವಿರೋಧ ಪಕ್ಷಗಳ ವಿರುದ್ದ ಬಿಜೆಪಿ ಬಳಕೆ ಮಾಡುತ್ತಲೇ ಇದೆ. ಇದೀಗ ಮುಂದುವರೆದ ಬಾಗವಾಗಿ ಕರ್ನಾಟಕದಲ್ಲೂ ಹತಾಶ ಮನೋಭಾವದಿಂದ 2009ರಂತೆ ಆಪರೇಷನ್ ಕಮಲ ಸಾಧ್ಯವಿಲ್ಲ ಎಂದು ತಿಳಿದು ಇದೀಗ ಈಡಿ ಮೂಲಕ ರಾಜ್ಯ ಸರಕಾರವನ್ನು ಬುಡಮೇಲು ಮಾಡುವ ಕೆಲಸವನ್ನು ಕೇಂದ್ರ ಸರಕಾರ ಮುಂದೆ ನಿಂತು ಮಾಡುತ್ತಿದೆ. ಆದರೆ, ಇವರ ಗೊಡ್ಡು ಬೆದರಿಕೆಗಳಿಗೆ, ಸಂವಿಧಾನ ವಿರೋಧಿ ನಡೆಗಳಿಗೆ ಬಗ್ಗುವ ಮಾತೇ ಇಲ್ಲ” ಎಂದು ಸ್ಪಷ್ಟಪಡಿಸಿದರು.
ವಿಪಕ್ಷದಲ್ಲಿದ್ದರೆ ಕೇಸ್, ಬಿಜೆಪಿಗೆ ಸೇರಿದ ಕೂಡಲೇ ಖುಲಾಸೆಯ ಚೀಟಿ :
ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ಕಳೆದ 10 ವರ್ಷದಲ್ಲಿ ಈಡಿ ರಾಜಕೀಯ ಅಸ್ತ್ರವಾಗಿದೆ. ಬಿಜೆಪಿಗೆ ಎಲ್ಲಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲವೋ ಅಲ್ಲೆಲ್ಲಾ ಈಡಿ-ಐಟಿ ಬಳಸಿಕೊಂಡು ಆಡಳಿತ ಪಕ್ಷಗಳ ಮೇಲೆ ದಾಳಿ ಮಾಡುವುದು ವಾಡಿಕೆಯಾಗಿಬಿಟ್ಟಿದೆ. ಬಿಜೆಪಿಯ ಇಂತಹ ನೀಚ ನಡೆಗಳಿಗೆ ಜಾರ್ಖಂಡ್, ಪಶ್ಚಿಮ ಬಂಗಾಳ, ದಿಲ್ಲಿ, ತಮಿಳುನಾಡು, ಕೇರಳ, ಆಂದ್ರಪ್ರದೇಶ, ಮಹಾರಾಷ್ಟ್ರದ ಸೇರಿದಂತೆ ಸಾಕಷ್ಟು ಉದಾಹರಣೆಗಳಿದ್ದು, ಪಟ್ಟಿ ಇನ್ನೂ ದೊಡ್ಡದಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಲೇವಡಿ ಮಾಡಿದರು.
ಕೆಲವು ಪ್ರತಿಷ್ಠಿತ ಸುದ್ದಿಸಂಸ್ಥೆಗಳು ಸಂಶೋಧನಾ ಸಂಸ್ಥೆಗಳು ಈ ಬಗ್ಗೆ ಅಧ್ಯಯನ ಮಾಡಿವೆ. 2014ರಲ್ಲಿ ಬಿಜೆಪಿ ಸರಕಾರ ಬಂದ ನಂತರ ದೇಶದಲ್ಲಿ ಈಡಿ ದಾಖಲಿಸುವ ಪ್ರಕರಣಗಳ ಸಂಖ್ಯೆ ಶೇ.400 ರಷ್ಟು ಹೆಚ್ಚಾಗಿದೆ. ಅದರಲ್ಲಿ ಶೇ.95 ರಷ್ಟು ಪ್ರಕರಣಗಳು ವಿಪಕ್ಷಗಳ ವಿರುದ್ಧವಾಗಿದೆ. ಶೇ.5 ರಷ್ಟು ಮಾತ್ರ ಬಿಜೆಪಿ ಅಥವಾ ಮಿತ್ರ ಪಕ್ಷಗಳ ಮೇಲೆ ಗುರಿಯಾಗಿದೆ. ಈ ಅಂಕಿಅಂಶಗಳೆಲ್ಲವೂ ಬಿಜೆಪಿ ವಾಷಿಂಗ್ ಮೆಷಿಂಗ್ ಪಕ್ಷ ಎಂಬುದನ್ನು ಸಾಬೀತುಪಡಿಸುತ್ತಿವೆ. ವಿಪಕ್ಷದಲ್ಲಿದ್ದರೆ ಕೇಸ್, ಬಿಜೆಪಿಗೆ ಸೇರಿದ ಕೂಡಲೇ ಖುಲಾಸೆಯ ಚೀಟಿ ಎಂಬುದನ್ನು ಒತ್ತಿ ಹೇಳುತ್ತಿವೆ. ಇದಕ್ಕೆ ಮಹಾರಾಷ್ಟ್ರ ತೆಲಂಗಾಣ, ಪಶ್ಚಿಮ ಬಂಗಾಳ, ಬಿಹಾರ, ಅಸ್ಸಾಂ ಸೇರಿದಂತೆ ಹಲವು ರಾಜ್ಯಗಳ ಉದಾಹರಣೆಗಳಿವೆ ಎಂದು ಅವರು ಅಂಕಿ-ಅಂಶಗಳನ್ನು ಮುಂದಿಟ್ಟರು.
ಬಿಜೆಪಿ ಹಗರಣಗಳ ಬಗ್ಗೆ ಈಡಿ ತನಿಖೆ ಏಕಿಲ್ಲ? :
ಈ ಹಿಂದೆ ಬಿಜೆಪಿ ಸರಕಾರದಲ್ಲೂ ಸಾಕಷ್ಟು ಹಗರಣಗಳು ನಡೆದಿವೆ. ಕೊರೋನಾ ಸಂದರ್ಭದಲ್ಲಿ ಹೆಣದ ಮೇಲೂ ಕಾಸು ಮಾಡಿದ ಆರೋಪ ಬಿಜೆಪಿ ಮೇಲೆ ಇದೆ. ಆದರೆ, ಜಾರಿ ನಿರ್ದೇಶನಾಲಯ ಈ ಬಗ್ಗೆ ಏಕೆ ತನಿಖೆ ನಡೆಸುವುದಿಲ್ಲ ? ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಪ್ರಶ್ನಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಹಿರಿಯ ಸಚಿವರಾದ ಕೆಜೆ ಜಾರ್ಜ್, ದಿನೇಶ್ ಗುಂಡೂರಾವ್, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರಾದ ಎ.ಎಸ್. ಪೊನ್ನಣ್ಣ ಅವರು ಇದ್ದರು.