ಕೆಸೆಟ್-2024 ಅಧಿಸೂಚನೆ ಪ್ರಕಟ : ನವೆಂಬರ್ 24ಕ್ಕೆ ಪರೀಕ್ಷೆ
ಸಾಂದರ್ಭಿಕ ಚಿತ್ರ
ಬೆಂಗಳೂರು: ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ-2024(ಕೆಸೆಟ್)ನ ಅಧಿಸೂಚನೆಯು ಪ್ರಕಟವಾಗಿದ್ದು, ನ.24ರಂದು ಪರೀಕ್ಷೆಯನ್ನು ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು(ಕೆಇಎ) ತಿಳಿಸಿದೆ.
ಅಧಿಸೂಚನೆಯಂತೆ ಜು.22ರಿಂದ ಆ.22ರವರೆಗೆ ಕೆಸೆಟ್ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ. ಅರ್ಜಿ ಸಲ್ಲಿಸಿದವರು ಅರ್ಜಿ ಶುಲ್ಕ ಪಾವತಿಸಲು ಆ.26 ಕೊನೆಯ ದಿನವಾಗಿದೆ. ನ.24ರಂದು ಪರೀಕ್ಷೆಯನ್ನು ನಡೆಸಲಾಗುತ್ತದೆ.
ಕೆಸೆಟ್ ಪರೀಕ್ಷೆಯನ್ನು 41 ವಿಷಯಗಳಲ್ಲಿ ನಡೆಸಲಾಗುತ್ತದೆ. ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳು, ರಾಜ್ಯದ ಯಾವುದೇ ವಿಶ್ವವಿದ್ಯಾಲಯ/ಪ್ರಥಮ ದರ್ಜೆ ಪದವಿ ಕಾಲೇಜು/ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇಮಕಗೊಳ್ಳಲು ಅರ್ಹರಾಗಿರುತ್ತಾರೆ.
ಸ್ನಾತಕೋತ್ತರ ಪದವಿಯನ್ನು ಪಡೆದ ಅಭ್ಯರ್ಥಿಗಳು ಹಾಗೂ ಪ್ರಸಕ್ತ ಸಾಲಿನಲ್ಲಿ ಸ್ನಾತಕೋತ್ತರ ಪದವಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಸ್ನಾತಕೋತ್ತರ ಪದವಿಯಲ್ಲಿ ಅಧ್ಯಯನ ಮಾಡಿದ ವಿಷಯಗಳಲ್ಲಿಯೇ ಅಭ್ಯರ್ಥಿಗಳು ಕೆಸೆಟ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು.
ಪರೀಕ್ಷೆಯನ್ನು ತೆಗೆದುಕೊಳ್ಳಲು ಯಾವುದೇ ಗರಿಷ್ಟ ವಯೋಮಿತಿ ಇರುವುದಿಲ್ಲ. ಸಾಮಾನ್ಯ ವರ್ಗ, ಪ್ರವರ್ಗ 2ಎ, 2ಬಿ, 3ಎ, 3ಬಿ ಹಾಗೂ ಇತರೆ ರಾಜ್ಯದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು 1000 ರೂ.ಗಳಾಗಿದ್ದು, ಪ್ರವರ್ಗ 1, ಎಸ್ಸಿ, ಎಸ್ಟಿ, ಪಿಡಬ್ಲ್ಯೂಡಿ ಮತ್ತು ತೃತೀಯ ಲಿಂಗ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವು 700ರೂ. ಗಳಾಗಿರುತ್ತದೆ.
ಪರೀಕ್ಷೆಗೆ ಅರ್ಜಿಯನ್ನು ಮತ್ತು ಅರ್ಜಿ ಶುಲ್ಕವನ್ನು ಆನ್ಲೈನ್ನಲ್ಲಿಯೇ ಸಲ್ಲಿಸಬೇಕು. ಒಮ್ಮೆ ಪಾವತಿ ಮಾಡಿದ ಶುಲ್ಕವನ್ನು ಯಾವುದೇ ಕಾರಣಕ್ಕೂ ಹಿಂತಿರುಗಿಸುವುದಿಲ್ಲ. ಕೆಸೆಟ್ ಪರೀಕ್ಷೆಯಲ್ಲಿ ಎರಡು ಪ್ರಶ್ನೆ ಪತ್ರಿಕೆಗಳು ಇರುತ್ತವೆ. ಎರಡು ಪತ್ರಿಕೆಗಳು ಬಹು ಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತವೆ. ಮೊದಲನೆ ಪತ್ರಿಕೆಯು 100 ಅಂಕಗಳಿಗೆ ನಡೆಯಲಿದ್ದು, 50 ಪ್ರಶ್ನೆಗಳು ಇರುತ್ತವೆ. ಎರಡನೆ ಪತ್ರಿಕೆಯು 200 ಅಂಕಗಳಿಗೆ ನಡೆಯಲಿದ್ದು, 100 ಪ್ರಶ್ನೆಗಳು ಇರುತ್ತವೆ. ಎಲ್ಲ ಪ್ರಶ್ನೆಗಳಿಗೆ ಉತ್ತರಿಸುವುದು ಕಡ್ಡಾಯವಾಗಿದ್ದು, ಎರಡು ಪತ್ರಿಕೆಗಳಿಗೆ ಸೇರಿ ಒಟ್ಟು 3 ಗಂಟೆಗಳ ಕಾಲ ಅವಕಾಶ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಕಾರ್ಯನಿರ್ವಹಕ ನಿರ್ದೇಶಕರು, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಸಂಪಿಗೆ ರಸ್ತೆ, 18ನೆ ಅಡ್ಡ ರಸ್ತೆ, ಮಲ್ಲೇಶ್ವರಂ, ಬೆಂಗಳೂರು-560012 ಅಥವಾ ದೂರವಾಣಿ ಸಂಖ್ಯೆ 080-23460460 ಅಥವಾ ವೆಬ್ಸೈಟ್ http://kea.kar.nic.in ಗೆ ಸಂಪರ್ಕಿಸಬಹುದಾಗಿದೆ.