ರಸ್ತೆ ಮಧ್ಯೆ ಕೆಟ್ಟು ನಿಂತ ಕೆಎಸ್ಸಾರ್ಟಿಸಿ ಬಸ್: 90ಕ್ಕೂ ಹೆಚ್ಚು ಪ್ರಯಾಣಿಕರ ಪರದಾಟ
ಸ್ಪಂದಿಸಿದ ಶಾಸಕಿ ನಯನಾ ಮೋಟಮ್ಮ
ಚಿಕ್ಕಮಗಳೂರು, ಸೆ.20: ಕೆಎಸ್ಸಾರ್ಟಿಸಿ ಬಸ್ ರಸ್ತೆಮಧ್ಯೆ ಬಸ್ ಕೆಟ್ಟು ನಿಂತು ಪ್ರಯಾಣಿಕರು ಪರದಾಡಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದಲ್ಲಿ ಬುಧವಾರ ನಡೆದಿದೆ.
ಬುಧವಾರ ಸಂಜೆ ವೇಳೆ ಬೆಂಗಳೂರಿನಿಂದ ಕಳಸ ತಾಲೂಕಿನ ಹೊರನಾಡಿಗೆ ಹೊರಟಿದ್ದ ಕೆಎಸ್ಸಾರ್ಟಿಸಿ ಬಸ್ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾಮದ ಬಳಿ ಕೆಟ್ಟು ನಿಂತಿದೆ. ಬಸ್‍ನಲ್ಲಿ ಸುಮಾರು 90 ಮಂದಿ ಪ್ರಯಾಣಿಕರಿದ್ದರು ಎಂದು ತಿಳಿದು ಬಂದಿದ್ದು, ಬಸ್‍ನ ಮಿತಿಮೀರಿ ಪ್ರಯಾಣಿಕರಿದ್ದ ಪರಿಣಾಮ ಬಸ್‍ನ ಪರ್ಚ್ ಕಟ್ ಆಗಿ ಮಾರ್ಗಮಧ್ಯೆ ಕೆಟ್ಟು ನಿಂತಿದೆ. ಈ ರಸ್ತೆಯಲ್ಲಿ ಸರಕಾರಿ ಬಸ್‍ಗಳ ಓಡಾಟ ತೀರಾ ಕಡಿಮೆ ಇರುವುದರಿಂದ ಬೇರೆ ಬಸ್ ಇಲ್ಲದೇ ಸುಮಾರು 2 ಗಂಟೆಗಳ ಕಾಲ ಪ್ರಯಾಣಿಕರು ರಸ್ತೆಯಲ್ಲೇ ಕುಳಿತು ಕಾಲ ಕಳೆದಿದ್ದಾರೆ.
ಈ ವೇಳೆ ಸುಂಕಸಾಲೆ ಗ್ರಾಮದಲ್ಲಿದ್ದ ಕಾರ್ಯಕ್ರಮಕ್ಕೆ ತೆರಳಿದ್ದ ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಅವರು ಇದೇ ರಸ್ತೆಯಲ್ಲಿ ಮೂಡಿಗೆರೆಯತ್ತ ಹೊರಟಿದ್ದು, ಈ ವೇಳೆ ರಸ್ತೆಯಲ್ಲಿದ್ದ ಪ್ರಯಾಣಿಕರ ಪರದಾಟ ಕಂಡು ತಮ್ಮ ಕಾರು ನಿಲ್ಲಿಸಿ ಪ್ರಯಾಣಿಕರ ಗೋಳು ಕೇಳಿದ್ದಾರೆ. ಕೂಡಲೇ ಸಾರಿಗೆ ಅಧಿಕಾರಿಗಳಿಗೆ ಕರೆ ಮಾಡಿದ ಶಾಸಕಿ ನಯನಾ ಮೋಟಮ್ಮ, ಬೇರೆ ಬಸ್‍ನ ವ್ಯವಸ್ಥೆ ಮಾಡುವ ಮೂಲಕ ಪ್ರಯಾಣಿಕರ ಸಮಸ್ಯೆಗ ಸ್ಪಂದಿಸಿದ್ದಾರೆ.