KSRTC | ಶೀಘ್ರದಲ್ಲೇ ರಸ್ತೆಗೆ ಇಳಿಯಲಿವೆ ಹೊಸ ಮಾದರಿಯ ಪ್ರೊಟೊ ಟೈಪ್ ಬಸ್‌ಗಳು!
ವಾಹನ ಪರಿಶೀಲಿಸಿದ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು, ಆ. 21: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್ಸಾರ್ಟಿಸಿ) ‘ಪಾಯಿಂಟ್ ಟು ಪಾಯಿಂಟ್’ ಮತ್ತು ವೇಗದೂತ ಕಾರ್ಯಾಚರಣೆಗೆ ನಿಯೋಜಿಸಲಾಗುವ ನೂತನ ಕರ್ನಾಟಕ ಸಾರಿಗೆ ವಾಹನದ ಪ್ರೊಟೊ ಟೈಪ್ ವಾಹನ ವಿನ್ಯಾಸವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಪರಿಶೀಲನೆ ನಡೆಸಿದರು.
ಸೋಮವಾರ ಇಲ್ಲಿನ ಶಾಂತಿನಗರದಲ್ಲಿನ ಸಾರಿಗೆ ಸಂಸ್ಥೆ ಕೇಂದ್ರ ಕಚೇರಿಯಲ್ಲಿ ನೂತನ ವಾಹನ ಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಪ್ರಸ್ತುತ ಇಂದು ಪರಿಶೀಲಿಸಲಾದ ಪ್ರೊಟೊ ಟೈಪ್ ವಾಹನವು ಪಾಯಿಂಟ್ ಟು ಪಾಯಿಂಟ್ ಮತ್ತು ವೇಗದೂತ ವಾಹನವನ್ನಾಗಿ ಉಪಯೋಗಿಸಲಿದ್ದು, ಮುಂಬರುವ ಎಲ್ಲ ಹೊಸ ಬಸ್ಸುಗಳು ಈ ರೀತಿಯ ವಿನ್ಯಾಸ ವನ್ನು ಹೊಂದಲಿದೆ’ ಎಂದು ಹೇಳಿದರು.
‘ಸಾರ್ವಜನಿಕ ಪ್ರಯಾಣಿಕರಿಗೆ ಉತ್ತಮ ಗುಣಮಟ್ಟದ ವಾಹನಗಳನ್ನು ಕಾರ್ಯಾಚರಣೆಗೊಳಿಸಿ, ಉತ್ತಮ ಸೇವೆಯನ್ನು ಒದಗಿಸುವ ನಿಟ್ಟಿನಲ್ಲಿ ಈ ಎಲ್ಲ ಬದಲಾವಣೆಗಳನ್ನು ತರಲಾಗಿದೆ ಹಾಗೂ ಈಗಾಗಲೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಇನ್ನು ಒಂದು ತಿಂಗಳ ಅವಧಿಯಲ್ಲಿ ಹೊಸ ಬಸ್ಸುಗಳು ಬರಲಿದ್ದು, ಎಲ್ಲ ಹೊಸ ವಾಹನಗಳು ಈ ಮಾದರಿಯ ವಿನ್ಯಾಸವನ್ನು ಹೊಂದಿರಲಿದೆ ಎಂದು ಅವರು ಮಾಹಿತಿ ನೀಡಿದರು.
ನೂತನವಾಗಿ ಕಾರ್ಯಾಚರಣೆಗೆ ನಿಯೋಜಿಸಲಾಗುವ ಈ ಸಾರಿಗೆ ವಾಹನವನ್ನು ಮೆ.ಕೆಎಂಎಸ್ ಕೋಚ್ ಬಿಲ್ಡರ್ಸ್ ನಿರ್ಮಾಣ ಮಾಡಿದ್ದಾರೆ. ಇದು ಈ ಕೆಳಕಂಡ ವಿಶಿಷ್ಟತೆಗಳನ್ನು ಹೊಂದಿರುತ್ತದೆ. ‘ವಾಹನದ ಎತ್ತರ-3420 ಮಿ.ಮಿ., ಆಸನಗಳ ಸಂಖ್ಯೆ-52, ಪ್ರಯಾಣಿಕರ ಆಸನ-ಬಕೆಟ್ ಟೈಪ್, ವಾಹನದ ಮುಂದಿನ/ಹಿಂದಿನ ಗಾಜು ವಿಶಾಲವಾಗಿರುತ್ತದೆ’ ಎಂದು ಸಂಸ್ಥೆ ತಿಳಿಸಿದೆ.
‘ಪ್ರಯಾಣಿಕರ ಕಿಟಕಿ ಪ್ರೇಮ್ ಹಾಗೂ ಮೇಲಿನ ಗಾಜು ವಿಶಾಲವಾಗಿರುತ್ತದೆ. ಕಿಟಕಿ ಗಾಜು ದೊಡ್ಡ ಟಿಂಟೆಡ್ ಗಾಜುಗಳು. ವಾಹನದ ಒಳಾಂಗಣದ ಲಗೇಜ್ ಕ್ಯಾರಿಯರ್-ವಿನೂತನ ವಿನ್ಯಾಸ. ಒಳಾಂಗಣದ ದೀಪ ಸತತವಾದ ಎಲ್‍ಇಡಿ ದೀಪ. ಹಿಂದಿನ/ಮುಂದಿನ ಮಾರ್ಗ ಎಲ್‍ಇಡಿ ಮಾರ್ಗ ಫಲಕ ಅಳವಡಿಕೆ. ಪ್ರಯಾಣಿಕರ ಬಾಗಿಲು-ಸ್ವಯಂಚಾಲಿತ ಸೆನ್ಸ್ರ್ರ್ ಮತ್ತು ತುರ್ತು ಬಟನ್ ವ್ಯವಸ್ಥೆ. ವಾಹನದ ಮುಂಭಾಗ ವಿನೂತನ ಆರ್ಕಷಕ ವಿನ್ಯಾಸ ದೊಡ್ಡ ಗ್ಲಾಸ್. ಜಿಲ್ಲಾ ಕೇಂದ್ರದಿಂದ ಬೆಂಗಳೂರಿಗೆ ಸಂಪರ್ಕ ಕಲ್ಪಿಸಲಿದೆ. ಆಸನಗಳ ಮಧ್ಯೆ ಸ್ಥಳಾವಕಾಶವನ್ನು ಹೆಚ್ಚಿಸಲಾಗಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ.
ಈ ಸಂದರ್ಭದಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ ಡಾ.ಎನ್.ವಿ.ಪ್ರಸಾದ್, ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಜಿ.ಸತ್ಯವತಿ ಹಾಗೂ ನಿಗಮದ ಹಿರಿಯ ಅಧಿಕಾರಿಗಳು ಹಾಜರಿದ್ದರು.