ಎಚ್.ಡಿ.ರೇವಣ್ಣ ಬಂಧನ ರಾಜಕೀಯ ಪ್ರೇರಿತ, ಇಡೀ ಪ್ರಕರಣದ ಹಿಂದೆ ದೊಡ್ಡ ತಿಮಿಂಗಿಲ ಇದೆ : ಕುಮಾರಸ್ವಾಮಿ
ಬೆಂಗಳೂರು : ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರ ಬಂಧನ ರಾಜಕೀಯ ಪ್ರೇರಿತ ಎಂದು ಕಿಡಿಕಾರಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ಇದೆಲ್ಲದರ ಹಿಂದೆ ದೊಡ್ಡ ತಿಮಿಂಗಿಲವೇ ಇದೆ ಎಂದು ಹೇಳಿದರು.
ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,"ವಕೀಲರಾದ ದೇವರಾಜೇಗೌಡರನ್ನು ಈಗ ಒಂದು ಪ್ರಕರಣದಲ್ಲಿ ಸಿಲುಕಿಸಿ ಬಂಧಿಸಿದ್ದು ಯಾಕೆ?. ಒಂದು ತಿಂಗಳಿನಿಂದ ಏನೆಲ್ಲಾ ಬೆಳವಣಿಗೆ ಆಯಿತು?. ಆಡಿಯೋ ಮೂಲಕ ಸಿಕ್ಕಿಬಿದ್ದ ದೊಡ್ಡ ತಿಮಿಂಗಲವನ್ನು ಬಿಟ್ಟು ದೇವರಾಜೇಗೌಡರನ್ನು ಬಂಧನ ಮಾಡಿದ್ದಾರೆ" ಎಂದು ಹೇಳಿದರು.
ʼವಿಡಿಯೋದಲ್ಲಿ ಬಂದಂತಹ ಮಹಿಳೆಯರ ಕುಟುಂಬಗಳ ಬಗ್ಗೆ ಸರಕಾರಕ್ಕೆ ಅನುಕಂಪ ಎನ್ನುವುದು ಇದೆಯಾ?. ಈ ಪ್ರಕರಣಕ್ಕೆ ಸಂಬಂಧಿಸಿ ನಾನು ಯಾರನ್ನೂ ವಹಿಸಿಕೊಳ್ಳುವ ಪ್ರಶ್ನೆಯೇ ಇಲ್ಲ. ಮಾಹಿತಿ ತಂತ್ರಜ್ಞಾನದ ಈ ಕಾಲದಲ್ಲಿ ಅಪರಾಧಿ ನಿರಪರಾಧಿ ಆಗುತ್ತಾನೆ. ಸರಕಾರಕ್ಕೆ ಬದ್ಧತೆ ಇದ್ದರೆ ತನಿಖೆಯನ್ನು ಸೂಕ್ತ ರೀತಿಯಲ್ಲಿ ನಡೆಸಲಿ. ಅದನ್ನು ಬಿಟ್ಟು ರೇವಣ್ಣ ಸುತ್ತ ತನಿಖೆ ಗಿರಕಿ ಹೊಡೆಯುವ ಅಗತ್ಯವಿಲ್ಲʼ ಎಂದರು.
ಕುಮಾರಸ್ವಾಮಿ ಅವರು ರೇವಣ್ಣ ಕುಟುಂಬವನ್ನು ಮುಗಿಸಲು ನೋಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ನಾನು ನ್ಯಾಯದ ಪರ ಇದ್ದೇನೆ, ನೊಂದ ಮಹಿಳೆಯರ ಪರ ಇದ್ದೇನೆ ಎಂದು ಅವರು ಸ್ಪಷ್ಟಪಡಿಸಿದರು
ನೊಂದ ಮಹಿಳೆಯರಿಗೆ ಹೆದರಿಸಿದ್ದು ಯಾರು?
ನೊಂದ ಮಹಿಳೆಯರಿಗೆ ನ್ಯಾಯ ಸಿಗುವಂತೆ ಆಗಬೇಕು. ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಓರ್ವ ನೊಂದ ಮಹಿಳೆ ದೂರು ಕೊಟ್ಟಿದ್ದಾರೆ. ಆ ಹೆಣ್ಣುಮಗಳಿಗೆ ಹೆದರಿಸಿ ಅವರಿಂದ ದೂರು ಪಡೆಯಲು ಪ್ರಯತ್ನ ಮಾಡಿದ್ದಾರೆ. ಅವರಿಗೆ ಹೆದರಿಸಿ ಬೆದರಿಸಿದವರು ಯಾರು?. ಮಫ್ತಿಯಲ್ಲಿ ಅವರ ಮನೆ ಬಳಿ ಹೋಗಿ ಹೆದರಿಸಿದ್ದು ಯಾರು?. ಇದೆಲ್ಲಾ ಎಸ್ ಐಟಿಗೆ ಗೊತ್ತಾ? ಎಂದು ಪ್ರಶ್ನಿಸಿದರು.
ಪೆನ್ ಡ್ರೈವ್ ಹಂಚಿದವರು ಎಲ್ಲಿ?. ಯಾಕೆ ಹಿಡಿದಿಲ್ಲ?
ಹಾಸನದಲ್ಲಿ ಪೆನ್ ಡ್ರೈವ್ ಗಳನ್ನು ಹಂಚಿರುವ ವ್ಯಕ್ತಿಗಳು ಎಲ್ಲಿ?. ಎಫ್ ಐಆರ್ ದಾಖಲಾಗಿರುವ ಒಬ್ಬ ವ್ಯಕ್ತಿಯನ್ನೂ ಎಸ್ ಐಟಿ ಹಿಡಿಯಲಿಲ್ಲ. ವಿಡಿಯೋಗಳನ್ನು ಮೊದಲು ಕದ್ದು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣನಾದ ಕಾರು ಚಾಲಕನನ್ನು ಇದುವರೆಗೂ ತನಿಖಾ ತಂಡ ಬಂಧನ ಮಾಡಿಲ್ಲ ಯಾಕೆ?. ಆದರೆ, ಖಾಸಗಿ ಚಾನಲ್ ನಲ್ಲಿ ಒಂದೂವರೆ ಗಂಟೆ ಕಾಲ ಕೂರಿಸಿಕೊಂಡು ಅವನನ್ನು ಸಂದರ್ಶನ ಮಾಡುತ್ತಾರೆ. ಎಸ್ ಐಟಿ ತಂಡಕ್ಕೆ ಸಿಗದ ಆ ವ್ಯಕ್ತಿ ಸುಲಭವಾಗಿ ಖಾಸಗಿ ಚಾನೆಲ್ ಗೆ ಸಿಗುತ್ತಾನೆ ಎಂದರೆ ಇಲ್ಲಿ ಏನು ನಡೆಯುತ್ತಿದೆ? ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನೆ ಮಾಡಿದರು.
ಪಟಾಕಿ ಸಿಡಿಸಿ ಸಂಭ್ರಮಿಸುವ ಸಮಯ ಇದಲ್ಲ:
ರಾಜ್ಯದಲ್ಲಿ ಅತ್ಯಂತ ಹೀನಾಯ ಘಟನೆ ನಡೆದಿದೆ. ರೇವಣ್ಣ ಕೂಡ ಆರೋಪ ಎದುರಿಸಬೇಕಾಯಿತು. ಅವರಿಗೆ ನಿರೀಕ್ಷಣಾ ಜಾಮೀನು ಸಿಕ್ಕಿದೆ. ನಮ್ಮ ಪಕ್ಷದ ಕಾರ್ಯಕರ್ತರಿಗೂ ಹೇಳಬಯಸುತ್ತೇನೆ. ಇದು ಪಟಾಕಿ ಸಿಡಿಸಿ ಸಂತೋಷಪಡುವ ಸಮಯ ಅಲ್ಲ. ಇಡೀ ಪ್ರಕರಣದಲ್ಲಿ ತಪ್ಪು ಮಾಡಿದವರಿಗೆ ಶಿಕ್ಷೆಯಾದಾಗ ಸಂಭ್ರಮಿಸಿ. ಈ ಘಟನೆ ರಾಜ್ಯವೇ ತಲೆ ತಗ್ಗಿಸುವಂತಹ ಘಟನೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು.
ವಿಧಾನ ಪರಿಷತ್ ಚುನಾವಣೆ ಅಭ್ಯರ್ಥಿ ಆಯ್ಕೆ
ವಿಧಾನ ಪರಿಷತ್ ಚುನಾವಣೆಯ ಒಂದು ಸ್ಥಾನಕ್ಕೆ ಅಭ್ಯರ್ಥಿ ಆಯ್ಕೆ ಆಗಬೇಕಿದ್ದು, ನಾಡಿದ್ದು ಸಭೆ ನಡೆಸಿ ಅಭ್ಯರ್ಥಿಯನ್ನು ಘೋಷಣೆ ಮಾಡುತ್ತೇವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.