ಬಸ್ ಪ್ರಯಾಣ ದರ ಏರಿಕೆ | ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ : ಎಚ್ಡಿಕೆ ಆಕ್ರೋಶ
ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ‘ರಾಜ್ಯ ಸರಕಾರ ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು ಇನ್ನೊಂದು ಕೈಯಲ್ಲಿ ಕಿತ್ತುಕೊಳ್ಳುತ್ತಿದೆ. ಈ ಸರಕಾರ ಬಂದ ದಿನದಿಂದ ಇದೇ ನಡೆಯುತ್ತಿದೆ. ಸಂಕ್ರಾಂತಿ ಕಳೆಯಲಿ, ಆಮೇಲೆ ಈ ಸರಕಾರದ ಬಗ್ಗೆ ಚರ್ಚೆ ಮಾಡುತ್ತೇನೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಇಂದಿಲ್ಲಿ ಬಸ್ ಪ್ರಯಾಣ ದರ ಏರಿಕೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶುಕ್ರವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಈ ಸರಕಾರ ಅಧಿಕಾರಕ್ಕೆ ಬಂದಾಗಿನಿಂದ ಜನರ ಮೇಲೆ ಬರೆ ಎಳೆಯುವುದು, ಅದನ್ನು ಜನರೂ ಭರಿಸಿಕೊಂಡು ಹೋಗುವುದು ಮಾಮೂಲಿ ಆಗಿಬಿಟ್ಟಿದೆ. ರಾಜ್ಯದಲ್ಲಿ ಸರಕಾರ ಎನ್ನುವುದು ಇದೆಯಾ? ಇದನ್ನು ಸರಕಾರ ಎಂದು ಕರೆಯುತ್ತಾರಾ? ಈ ಸರಕಾರ ಬಂದಾಗಿನಿಂದ ಬರೀ ಬೆಲೆ ಏರಿಕೆ ಮಾಡುವುದೇ ಆಗಿದೆ’ ಎಂದು ಕಿಡಿಕಾರಿದರು.
‘ನಮ್ಮ ರಾಜ್ಯದಲ್ಲಿ ಬೆಲೆ ಏರಿಕೆ ಎನ್ನುವುದು ಅಚ್ಚರಿಯ ವಿಷಯವಲ್ಲ. ಸರಕಾರ ಪ್ರಯಾಣ ದರವನ್ನು ಶೇ.15ರಷ್ಟು ಏರಿಕೆ ಮಾಡಿ ಜನರ ಮೇಲೆ ದೊಡ್ಡ ಬರೆ ಹಾಕಿದೆ. ಜನರೂ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಜನರಿಗೂ ಅಭ್ಯಾಸವಾಗಿ ಹೋಗಿದೆ. ಎರಡು ದಿನ ಆಕ್ರೋಶ ವ್ಯಕ್ತಪಡಿಸಿ ಮೂರನೇ ದಿನ ಮರೆತು ಹೋಗಿ ಪ್ರಯಾಣ ದರ ಏರಿಕೆಗೇ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಇದು ನೈಜ ಸ್ಥಿತಿ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಇದೇ ಸರಕಾರ ಡಿಸೇಲ್, ಪೆಟ್ರೋಲ್ ಮೇಲೆ ಸೆಸ್ ಹಾಕಿತ್ತು. ಜನರು ಪ್ರತಿಭಟನೆ ಮಾಡಲಿಲ್ಲ. ಅದಕ್ಕೆ ಅಡ್ಜೆಸ್ಟ್ ಆದರು. ಮುದ್ರಾಂಕ ಶುಲ್ಕ ಹೆಚ್ಚಳ ಮಾಡಿದ್ದು, ಮದ್ಯದ ದರವೂ ಏರಿಕೆಯಾಗಿದೆ. ಇದೀಗ ಹಾಲಿನ ದರ ಏರಿಕೆ ಮಾಡುತ್ತಾರಂತೆ. ಈಗ ನೀರಿನ ದರವೂ ಏರಿಕೆ ಆಗುತ್ತದೆ ಎನ್ನುವ ಮಾಹಿತಿ ಬರುತ್ತಿದೆ. ಎಲ್ಲ ದರಗಳನ್ನು ಸರಕಾರ ಏರಿಕೆ ಮಾಡುತ್ತಿದೆ. ಆದರೆ, ಗ್ಯಾರಂಟಿ ಸಂತೋಷದಲ್ಲಿ ಜನರು ಆಕ್ರೋಶ ವ್ಯಕ್ತಪಡಿಸುತ್ತಿಲ್ಲ ಎಂದು ಅವರು ಹೇಳಿದರು.
ಹೊಸವರ್ಷದಲ್ಲಿ ರಾಜ್ಯ ಸರಕಾರ ಅಭಿವೃದ್ಧಿಗೆ ಹೊಸ ಕಾರ್ಯಕ್ರಮ ಘೋಷಣೆ ಮಾಡಬೇಕಿತ್ತು. ಆದರೆ, ಬೆಲೆ ಏರಿಕೆ ಘೋಷಣೆ ಮಾಡಿದೆ. ಬೆಲೆ ಏರಿಕೆಗೆ ವರ್ಷಪೂರ್ತಿ ತಯಾರಾಗಿ ಎಂದು ಜನರಿಗೆ ಸಂದೇಶ ಕೊಡುತ್ತಿದೆ. ಅನಿವಾರ್ಯ ಇದ್ದಾಗ ಮಾತ್ರ ಬೆಲೆ ಏರಿಕೆ ಮಾಡುವುದನ್ನು ನೋಡಿದ್ದೇವೆ. ಆದರೆ, ಇವರು ಮಾಡಿರುವ ತಪ್ಪಿಗೆ ಜನರ ಮೇಲೆ ಬರೆ ಎಳೆಯುತ್ತಿದ್ದಾರೆ. ಎಲ್ಲ ಸಮಸ್ಯೆಗಳನ್ನೂ ಸರಕಾರವೇ ಮೈಮೇಲೆ ಎಳೆದುಕೊಂಡಿದೆ ಎಂದು ಅವರು ಟೀಕಿಸಿದರು.
ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲಾ ಬೆಲೆ ಏರಿಕೆ ಮಾಡಲಾಗುತ್ತಿದೆ. ವಿದ್ಯುತ್ ಇಲಾಖೆ ಏನಾಗುತ್ತದೋ ನೋಡಬೇಕು. ಸರಕಾರದ ಅಸಮರ್ಪಕ ನಿರ್ವಹಣೆಯಿಂದ ಇಲಾಖೆ ಹಾಳಾಗುತ್ತಿದೆ. ಗ್ಯಾರಂಟಿಗಳಲ್ಲಿ ಯುವನಿಧಿ ಯೋಜನೆ ಮಾಡಿದ್ದಾರೆ. ಇದುವರೆಗೆ ಎಷ್ಟು ಯುವ ಜನರಿಗೆ ಹಣ ಹೋಗಿದೆ ಎಂದು ಪ್ರಶ್ನಿಸಿದರು.