ಕೇತಿಗಾನಹಳ್ಳಿಯಲ್ಲಿ ತಮ್ಮ ಜಮೀನು ಸರ್ವೆ ಸೇಡಿನ ರಾಜಕೀಯದ ಭಾಗ : ಕುಮಾರಸ್ವಾಮಿ

ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು: ರಾಮನಗರ ಜಿಲ್ಲೆಯ ಬಿಡದಿ ಬಳಿಯ ಕೇತಿಗಾನಹಳ್ಳಿಯಲ್ಲಿ ತಮ್ಮ ಜಮೀನು ಸರ್ವೆ ಸೇಡಿನ ರಾಜಕೀಯದ ಭಾಗ. ಇಷ್ಟು ದಿನ ನನ್ನ ಜಮೀನು ತನಿಖೆಗೆ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ ಎಸ್ಐಟಿ ರಚನೆ ಮಾಡುತ್ತಿದ್ದರು. ಇದೀಗ ಐಎಎಸ್ ಅಧಿಕಾರಿಗಳ ಎಸ್ಐಟಿ ರಚನೆ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಟೀಕಿಸಿದ್ದಾರೆ.
ಬುಧವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಆ ಭೂಮಿಯನ್ನು ನಾನು ಖರೀದಿಸಿ 40 ವರ್ಷವಾಗಿದೆ. ಅಷ್ಟೂ ವರ್ಷಗಳಿಂದ ಈ ವಿಷಯವನ್ನು ಜೀವಂತವಾಗಿಟ್ಟು ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. 1984ರಲ್ಲಿ ನಾನು ಈ ಭೂಮಿಯನ್ನು ಖರೀದಿ ಮಾಡಿದ್ದು. ಸಿನಿಮಾ ಹಂಚಿಕೆದಾರನಾಗಿ ದುಡಿದ ಹಣದಲ್ಲಿ ನಾನು ಈ ಭೂಮಿಯನ್ನು ಖರೀದಿ ಮಾಡಿದ್ದೇನೆ. ನನ್ನನ್ನು ರಾಜಕೀಯವಾಗಿ ಎದುರಿಸಲಾಗದ ಅಸಹಾಯಕತೆಯಿಂದ ಕಾಂಗ್ರೆಸ್ ಸರಕಾರ ಸರ್ವೇ ಮೂಲಕ ನನ್ನನ್ನು ಹೆದರಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
2012ರಿಂದಲೂ ನನ್ನ ವಿರುದ್ದ ತನಿಖೆ ಮಾಡುತ್ತಿದ್ದಾರೆ. ಏನು ಸಿಕ್ಕಿಲ್ಲ. ನಾನು ಸಿದ್ದರಾಮಯ್ಯರ ರೀತಿ ಸರಕಾರಿ ಜಮೀನು ಲೂಟಿ ಮಾಡಿಲ್ಲ. ಈಗ ಆಗಿರುವ ಎಲ್ಲ ತನಿಖೆಗಳು ಸಾಕಾಗುವುದಿಲ್ಲ ಎಂದು ಈಗ ಐಎಎಸ್ ಅಧಿಕಾರಿಗಳ ನೇತೃತ್ವದಲ್ಲಿ ಎಸ್ಐಟಿ ತನಿಖೆ ಮಾಡಿಸುತ್ತಿದ್ದಾರೆ. ಯಾವುದೇ ತನಿಖೆ ಮಾಡಲಿ, ನಾನು ಮುಕ್ತವಾಗಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
1986ರಲ್ಲಿ ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಮತ್ತು ಜಿ.ಪಂ.ಸದಸ್ಯ ರಾಮಚಂದ್ರ ಇದೇ ಜಮೀನು ವಿಷಯದಲ್ಲಿ ಆಗಿನ ಪ್ರಧಾನಿ, ಗೃಹ ಮಂತ್ರಿಗೆ ಪತ್ರ ಬರೆದಿದ್ದರು. ತಮ್ಮ ದೂರಿನಲ್ಲಿ ಅವರು ಕುಮಾರಸ್ವಾಮಿ ಜಮೀನು ಖರೀದಿಸಿದ್ದಾರೆಂದು ಹೇಳಿದ್ದರೇ ಹೊರತು ಕಬಳಿಸಿದ್ದಾರೆಂದು ಆರೋಪ ಮಾಡಿರಲಿಲ್ಲ. ನಾನು ಖರೀದಿ ಮಾಡಿರುವ ಆ ಭೂಮಿಯಲ್ಲಿ ಕೃಷಿ ಮಾಡುತ್ತಿದ್ದೇನೆಯೇ? ಹೊರತು ಯಾವುದೇ ರೀತಿಯ ಅಕ್ರಮ ಚಟುವಟಿಕೆ ನಡೆಸಿಲ್ಲ ಎಂದು ತಿರುಗೇಟು ನೀಡಿದರು.
ಸರಕಾರ ರಚನೆ ಮಾಡಿರುವ ಎಸ್ಐಟಿ ನನಗೆ ನೊಟೀಸ್ ನೀಡದೇ ಸರ್ವೇ ಮಾಡಲು ಹೊರಟಿತ್ತು. ಜಿಲ್ಲಾಧಿಕಾರಿ ಹಾಗೂ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ನಾನು ಕರೆ ಮಾಡಿ ಮಾತನಾಡಿದೆ. ನೋಟಿಸ್ ಕೊಟ್ಟು ಸರ್ವೇ ಮಾಡಿ ಎಂದು ಹೇಳಿದ್ದೆ. ಜಾಗತಿಕ ಮಟ್ಟದ ಭೂಮಪಕರನ್ನು ಕರೆತಂದು ಸರ್ವೇ ಮಾಡಿಸಿಕೊಳ್ಳಿ ಎಂದು ಹೇಳಿದ್ದೆ. ನಾನು ಖರೀದಿ ಮಾಡಿರುವ ಭೂಮಿಯಲ್ಲಿ ಯಾವುದೇ ಅಕ್ರಮವಾಗಿಲ್ಲ ಎಂದರು.
ಈ ರಾಜ್ಯದಲ್ಲಿ ಯಾರು ಯಾರು ಏನೇನು ಮಾಡಿದ್ದಾರೆ, ಎಷ್ಟಲ್ಲ ಭೂಮಿ ಲೂಟಿ ಹೊಡೆದಿದ್ದಾರೆ ಎಂಬುದಕ್ಕೆ ಇತಿಹಾಸವೇ ಇದೆ. ಅವರೆಲ್ಲ ಸಾಂವಿಧಾನಿಕ ಸಂಸ್ಥೆಗಳನ್ನು, ತನಿಖಾ ವ್ಯವಸ್ಥೆಯನ್ನು ಹೇಗೆಲ್ಲ ದುರ್ಬಳಕೆ ಮಾಡಿಕೊಂಡಿದ್ದಾರೆ ಎನ್ನುವುದು ಗೊತ್ತಿದೆ. ಅವರ ಹಣೆಬರಹದ ದಾಖಲೆಗಳು ನನ್ನ ಬಳಿ ಇವೆ ಎಂದು ಕುಮಾರಸ್ವಾಮಿ ಎಚ್ಚರಿಸಿದರು.
ಅವಹೇಳನ ಸಲ್ಲ: ದೇವೇಗೌಡರನ್ನು ‘ಮೋದಿ ಚಿಯರ್ ಲೀಡರ್’ ಎಂದು ಆಗೌರವದ ಹೇಳಿಕೆ ನೀಡಿರುವುದು ಸರಿಯಲ್ಲ. ದೇವೆಗೌಡರ ಬಗ್ಗೆ ಮಾತನಾಡುವ ಮುನ್ನ ಅವರು ತಮ್ಮ ಯೋಗ್ಯತೆ ಅರಿತುಕೊಂಡರೆ ಉತ್ತಮ. ರಾಜ್ಯದ ನೀರಾವರಿಗೆ ದೇವೇಗೌಡರು ಏನು ಮಾಡಿದ್ದಾರೆ ಎನ್ನುವುದು ಇಡೀ ದೇಶಕ್ಕೆ ಗೊತ್ತಿದೆ ಎಂದು ಟೀಕಿಸಿದರು.
ಡಿ.ಕೆ.ಶಿವಕುಮಾರ್ ಅವರಿಂದ ರಾಜ್ಯಕ್ಕೆ ಸಿಕ್ಕ ಕೊಡುಗೆ ಏನು? ದುಡ್ಡು ಹೊಡೆದಿರುವುದೇ ಅವರ ಕೊಡುಗೆ. ಇನ್ನೊಂದು ವಾರ ನೋಡೋಣ. ಈ ಸರಕಾರ ಏನೇನು ಮಾಡುತ್ತದೆ ಎಂದು. ಆ ಮೇಲೆ ಮಾತನಾಡುತ್ತೇನೆ. ರಾಜ್ಯದ ಸಮಸ್ಯೆಗಳ ಬಗ್ಗೆ ಇವರ ಗಮನವೇ ಇಲ್ಲ ಎಂದು ಕುಮಾರಸ್ವಾಮಿ ಇದೇ ವೇಳೆ ದೂರಿದರು.