ಡಿ.ಕೆ.ಶಿವಕುಮಾರ್ ಅವರನ್ನು ಮತ್ತೊಮ್ಮೆ ಜೈಲಿಗೆ ಕಳುಹಿಸಲು ಕುಮಾರಸ್ವಾಮಿ ಸಂಚು ರೂಪಿಸಿದ್ದಾರೆ: ಎಂ.ಲಕ್ಷ್ಮಣ್ ಆರೋಪ
ಮೈಸೂರು: ʼʼಒಕ್ಕಲಿಗ ಮುಖಂಡರ ಏಳಿಗೆ ಸಹಿಸದ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಮತ್ತೊಮೆ ಜೈಲಿಗೆ ಕಳುಹಿಸಲು ಸಂಚು ರೂಪಿಸಿದ್ದಾರೆʼʼ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದರು.
ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಬಹಳ ಹತಾಶರಾಗಿ ಒತ್ತಡಕ್ಕೆ ಒಳಗಾಗಿ ಕಾಂಗ್ರೆಸ್ ನಾಯಕರ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಬಿಜೆಪಿ ಮೈತ್ರಿಯ ಮೊದಲ ಷರತ್ತು ಡಿ.ಕೆ. ಶಿವಕುಮಾರ್ ಅವರನ್ನು ಜೈಲಿಗೆ ಕಳಹಿಸಬೇಕು ಎಂಬುದಾಗಿದೆ ಎಂದು ಹೇಳಿದರು.
ಕುಮಾರಸ್ವಾಮಿ ಅವರಿಗೆ ಧಮ್ಮು, ತಾಕತ್ತು ಇದ್ದರೆ ಜೈಲಿಗೆ ಕಳುಹಿಸಬೇಕು. ಡಿ.ಕೆ. ಶಿವಕುಮಾರ್ ಜೀವ ತೆಗೆಯುವ ಸಂಚು ರೂಪಿಸಿದ್ದಾರೆ. ಇದರ ಬಗ್ಗೆ ತನಿಖೆ ನಡೆಸುವಂತೆ ಮುಖ್ಯಮಂತ್ರಿಗೆ ಮನವಿ ಕೊಡುತ್ತೇನೆ ಎಂದು ತಿಳಿಸಿದರು.
ಕುಮಾರಸ್ವಾಮಿ ಅವರಿಗೆ ತನ್ನ ಅಣ್ಣನ ಮಗನ ಬೆಳವಣಿಗೆ ಸಹಿಸಲಾಗದು. ಭವಾನಿ ರೇವಣ್ಣ ಅವರಿಗೆ ಟಿಕೆಟ್ ತಪ್ಪಿಸಿದರು. ಹಿಂದೆ ಚೆಲುವರಾಯಸ್ವಾಮಿ, ಮಾಗಡಿ ಬಾಲಕೃಷ್ಣ ಬೆಳೆಯೋದು ಸಹಿಸಲಿಲ್ಲ. ಇದನ್ನು ಒಕ್ಕಲಿಗ ಸಮಾಜ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.
19 ಶಾಸಕರ ಸಮುಖದಲ್ಲಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಒಪ್ಪಿಗೆ ಇದೆ ಎಂಬುದನ್ನು ಸಾಬೀತುಪಡಿಸುವಂತೆ ಸವಾಲು ಹಾಕಿದರು. ರಾಜ್ಯಾಧ್ಯಕ್ಷರಿಗೆ ತಿಳಿಸಿದೇ ಮೈತ್ರಿ ಮಾಡಿಕೊಂಡಿದ್ದಾರೆ. ಸಿ.ಎಂ. ಇಬ್ರಾಹಿಂ ರಾಜೀನಾಮೆ ಸಲ್ಲಿಸಲು ಅ. 16ರ ತನಕ ಯಾಕೇ ಕಾಯಬೇಕು. ಜೆಡಿಎಸ್ ಫ್ಯಾಮಿಲಿ ಟ್ರಸ್ಟ್ ಎಂದು ಟೀಕಾಪ್ರಹಾರ ನಡೆಸಿದರು.
ಹಿಟ್ ಅಂಡ್ ರನ್ ಹೇಳಿಕೆ: ಶಾಸಕ ಜಿ.ಟಿ.ದೇವೇಗೌಡ ಅವರು ಕಾಂಗ್ರೆಸ್ ಸರ್ಕಾರ ಸೂಸೈಡ್ ಭಾಗ್ಯ ಕೊಟ್ಟಿದೆ ಎಂದು ಆರೋಪಿಸಿದ್ದಾರೆ. ಯಾವ ಆಧಾರದ ಮೇಲೆ ಹೇಳಿದರು ಎಂದು ಪ್ರಶ್ನಿಸಿದ ಲಕ್ಷ್ಮಣ್, ರಾಷ್ಟ್ರೀಯ ಅಪರಾಧ ಬ್ಯೂರೊ ಬಿಡುಗಡೆ ಮಾಡಿರುವ ಮಾಹಿತಿಯನ್ನು ಹಂಚಿಕೊಂಡರು.
ದೇಶದಲ್ಲಿ 2014ರಿಂದ 2020ರವರೆಗೆ ವಾರ್ಷಿಕ 6 ಸಾವಿರ ರೈತರು ಆತಹತ್ಯೆ ಮಾಡಿಕೊಂಡಿದ್ದಾರೆ. ಅಂದರೆ ವರ್ಷಕ್ಕೆ 1 ಸಾವಿರ ರೈತರು. 2020-21ರಲ್ಲಿ 10 ಸಾವಿರ, 2022ರಲ್ಲಿ 10300 ರೈತರು ಆತಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ 2019ರಿಂದ 2023ರವರೆಗೆ 4457, ಕಾಂಗ್ರೆಸ್ ಸರ್ಕಾರದ 5 ತಿಂಗಳಲ್ಲಿ 96 ರೈತರು ಆತಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿಸಿದರು.
ಜಿ.ಟಿ.ದೇವೇಗೌಡ ಅವರು ಹಿಟ್ ಅಂಡ್ ರನ್ ಹೇಳಿಕೆ ಕೊಡಬಾರದು. ನೂತನವಾಗಿ ಆಯ್ಕೆಯಾದ ಅಪ್ಪ-ಮಗ ತಮ ಕ್ಷೇತ್ರಗಳಿಗೆ ಯಾವ ಯೋಜನೆ ತಂದಿದ್ದಾರೆ? ಮಾಡಿರುವ ಕೆಲಸದ ಬಗ್ಗೆ ಪಟ್ಟಿ ಬಿಡುಗಡೆ ಮಾಡಬೇಕು. ತಮ್ಮೊಂದಿಗೆ ಚರ್ಚೆಗಾದರೂ ಅವಕಾಶ ಕೊಡಬೇಕು ಎಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಿ.ಎಂ. ರಾಮು, ಸೇವಾದಳ ಗಿರೀಶ್, ಮಾಧ್ಯಮ ಸಂಚಾಲಕ ಕೆ. ಮಹೇಶ್ ಇದ್ದರು.