ಡಿ.ಕೆ.ಶಿವಕುಮಾರ್ ರಾಜೀನಾಮೆಗೆ ಕುಮಾರಸ್ವಾಮಿ ಆಗ್ರಹ
"ಪೆನ್ಡ್ರೈವ್ ಸೃಷ್ಟಿಕರ್ತ ಕಾರ್ತಿಕ್ ಮೊದಲು ಈ ವಿಡಿಯೊಗಳನ್ನು ತಂದು ಕೊಟ್ಟಿದ್ದೇ ಡಿಕೆಶಿಗೆ"
ಎಚ್.ಡಿ.ಕುಮಾರಸ್ವಾಮಿ / ಡಿ.ಕೆ.ಶಿವಕುಮಾರ್
ಬೆಂಗಳೂರು : ಮಾಜಿ ಪ್ರಧಾನಿ ಎಚ್.ಡಿ.ದೇವೆಗೌಡ ಕುಟುಂಬಕ್ಕೆ ಕಳಂಕ ತರುವ ಪೆನ್ಡ್ರೈವ್ ಸಂಚಿನಲ್ಲಿ ನೇರವಾಗಿ ಭಾಗಿಯಾಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಡಿಯೋ ಸಂಭಾಷಣೆಯಲ್ಲಿ ಡಿ.ಕೆ.ಶಿವಕುಮಾರ್ ಅವರ ಪಾತ್ರ ಸ್ಪಷ್ಟವಾಗಿದೆ. ಅವರು ರಾಜೀನಾಮೆ ಕೊಡಲೇಬೇಕು. ಇಲ್ಲವಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು.
ಪೆನ್ಡ್ರೈವ್ ಸೃಷ್ಟಿಕರ್ತ ಕಾರ್ತಿಕ್ ಮೊದಲು ಈ ವಿಡಿಯೊಗಳನ್ನು ತಂದು ಕೊಟ್ಟಿದ್ದೇ ಶಿವಕುಮಾರ್ ಗೆ. ಆ ಸಂದರ್ಭದಲ್ಲಿ ಅವರ ಪಕ್ಷದ ಹಾಸನದ ಅಭ್ಯರ್ಥಿಯೂ ಇದ್ದರು. ಪ್ರಕರಣದಲ್ಲಿ ಇಷ್ಟೆಲ್ಲ ಭಾಗಿಯಾದ ಮೇಲೂ ಅವರನ್ನು ಸಂಪುಟದಲ್ಲಿ ಮುಂದುವರಿಸುವುದು ಸರಿಯಲ್ಲ. ಅವರು ಅಧಿಕಾರ ದುರ್ಬಳಕೆ ಮಾಡಿಕೊಂಡಿರುವುದು ಸ್ಪಷ್ಟ. ಸರಕಾರ ಇಂತಹ ತಪ್ಪಿತಸ್ಥರಿಗೆ ರಕ್ಷಣೆ ಕೊಡಬಾರದು ಎಂದರು.
ರಾಜಕೀಯ ಸ್ವಾರ್ಥಕ್ಕಾಗಿ, ವಾಮಮಾರ್ಗದಲ್ಲಿ ಚುನಾವಣೆ ಗೆಲ್ಲಬೇಕೆಂಬ ಕಾರಣಕ್ಕೆ ಶಿವಕುಮಾರ್ ಹೂಡಿರುವ ಸಂಚು ಏನು ಎಂಬುದು ಜಗಜ್ಜಾಹೀರಾಗಿದೆ. ಇಡೀ ದೇಶವೇ ಆ ವ್ಯಕ್ತಿಯ ಹೀನ ಕೆಲಸದ ಬಗ್ಗೆ ಮಾತನಾಡುತ್ತಿದೆ. ನೊಂದ ಮಹಿಳೆಯರ ಜೀವನಕ್ಕೆ ಕೊಳ್ಳಿ ಇಟ್ಟ ಈ ವ್ಯಕ್ತಿಯನ್ನು ರಕ್ಷಣೆ ಮಾಡುವ ಕೆಲಸ ಮಾಡಲಾಗುತ್ತಿದೆ. ಒಂದು ವೇಳೆ ಸರಕಾರ ಈ ಕಳಂಕಿತ ಸಚಿವನನ್ನು ರಕ್ಷಣೆ ಮಾಡಿದರೆ ಭಾರೀ ದೊಡ್ಡ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪೆನ್ಡ್ರೈವ್ ಸೃಷ್ಟಿ ಮಾಡಿ ಅದನ್ನೆಲ್ಲಾ ಹೊರಗೆ ತಂದು ಮಹಿಳೆಯರಿಗೆ ಕಂಟಕರಾದವರೇ ಇವತ್ತು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರಶ್ನೆ ಮಾಡುತ್ತಿದ್ದಾರೆ. ಎನ್ಡಿಎ ಮೈತ್ರಿಕೂಟದಿಂದ ಜೆಡಿಎಸ್ ಪಕ್ಷವನ್ನು ಯಾವಾಗ ಹೊರಕ್ಕೆ ಹಾಕುತ್ತೀರಿ ಎಂದು ಕೇಳುತ್ತಾರೆ. ಆಡಿಯೊ ಸಂಭಾಷಣೆಯಲ್ಲಿ ಈ ಅಂಶವೂ ಇದೆ. ಅಲ್ಲಿಗೆ ಇವರ ದುರುದ್ದೇಶ ಏನು ಎನ್ನುವುದು ಅರ್ಥ ಆಗಿದೆ ಎಂದು ಕುಮಾರಸ್ವಾಮಿ ಹೇಳಿದರು.
ಜೈಲಿನಲ್ಲಿ ವಕೀಲ ದೇವೇರಾಜೇಗೌಡರಿಗೆ ಜೀವ ಭಯ ಇದೆ ಎನ್ನುವ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಅವರಿಗೆ ಜೈಲಿನಲ್ಲಿ ಜೀವ ಬೆದರಿಕೆ ಇರಬಹುದು. ಈ ಸರಕಾರದಲ್ಲಿ ಇರುವ ಬಹಳ ಜನರು ಯಾವ ಹಿನ್ನೆಲೆಯಿಂದ ಬಂದಿದ್ದಾರೆ ಎನ್ನುವ ಹಿನ್ನಲೆಯಲ್ಲಿ ನೋಡಿದರೆ ನಿಜ ಇರಬಹುದು ಎಂದರು,
ಕಾರ್ತಿಕ್ ಗೌಡ, ನವೀನ್ ಗೌಡ ಸೇರಿ ಪೆನ್ಡ್ರೈವ್ ಹಂಚಿದರನ್ನು ಇವತ್ತಿನವರೆಗೂ ಬಂಧಿಸಿಲ್ಲ. ಸಿಟ್ ತನಿಖಾಧಿಕಾರಿಗಳಿಗೆ ಹೇಳಿಕೆ ನೀಡಿದ್ದಾನೆ ಎನ್ನುತ್ತೀರಿ, ಹಾಗಾದರೆ ಅವನು ಯಾರ ವಶದಲ್ಲಿ ಇದ್ದಾನೆ. ಯಾವತ್ತೂ ಅವನು ತನಿಖಾ ತಂಡಕ್ಕೆ ಹೇಳಿಕೆ ಕೊಟ್ಟ? ಅವನನ್ನು ಯಾಕೆ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಿಲ್ಲ? ಎಂದು ಅವರು ಕೇಳಿದರು.