ಎಚ್.ಡಿ.ಕುಮಾರಸ್ವಾಮಿ ಈಗ ಬಿಜೆಪಿ ವಕ್ತಾರ: ಸಿಎಂ ಸಿದ್ದರಾಮಯ್ಯ ವ್ಯಂಗ್ಯ
ಬೆಂಗಳೂರು: ‘ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಈಗ ಬಿಜೆಪಿ ವಕ್ತಾರ ಆಗಿಬಿಟ್ಟಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ.
ಶುಕ್ರವಾರ ಬಜೆಟ್ ಮಂಡನೆ ಬಳಿಕ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಸವಣ್ಣನವರು ಸಮಾನತೆಯನ್ನು ಕಂಡಿದ್ದವರು. ಸಮಸಮಾಜಕ್ಕಾಗಿ ಚಳವಳಿ ಮಾಡಿದವರನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದೇವೆ ಎಂದರು.
1.20ಲಕ್ಷ ಕೋಟಿ ರೂ. ಅಭಿವೃದ್ಧಿಗೆ ಖರ್ಚು ಮಾಡಿದರೆ ಅದು ಅಭಿವೃದ್ಧಿಪೂರಕ ಬಜೆಟ್. 52,009 ಕೋಟಿ ರೂ.ಬಡವರಿಗೆ ಖರ್ಚು ಮಾಡಿದೆ ಅದು ಅಭಿವೃದ್ಧಿಗೆ ಪೂರಕವಾಗಿರುವಂಥದ್ದು. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕಾಲದಲ್ಲಿ 77,750 ಕೋಟಿ ರೂ. ಒಟ್ಟು ಸಾಲ, 23ಸಾವಿರ ಕೋಟಿ ರೂ.ಗಳ ಋಣೇತರ ಸ್ವೀಕೃತಿಗಳಾಗಿದೆ. ಕೇಂದ್ರ ಸರಕಾರ 16.85ಲಕ್ಷ ಕೋಟಿ ರೂ.ಈ ವರ್ಷಕ್ಕೆ ಸಾಲ ಮಾಡಿದೆ ಎಂದು ಅವರು ವಿವರಿಸಿದರು.
ಬಿಜೆಪಿಗೆ ಕಾಮಾಲೆ ರೋಗ: 3,71,383 ಕೋಟಿ ಗಾತ್ರದ ಬಜೆಟ್‍ನಲ್ಲಿ ಅಲ್ಪಸಂಖ್ಯಾತರಿಗೆ 3ಸಾವಿರ ಕೋಟಿ ರೂ. (ಶೇ.1ಕ್ಕಿಂತ ಕಡಿಮೆ) ಕೊಡಲಾಗಿದೆ. ಎಸ್‍ಸಿಪಿ/ಟಿಎಸ್‍ಪಿಯಲ್ಲಿ 2017-18ರಲ್ಲಿ 30ಸಾವಿರ ಕೋಟಿ ರೂ.ನೀಡಲಾಗಿತ್ತು. ಕಳೆದ ಜುಲೈ ಬಜೆಟ್‍ನಲ್ಲಿ 34ಸಾವಿರ ಕೋಟಿ ರೂ.ಕೊಡಲಾಗಿತ್ತು. ಈಗ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರಿಗೆ 39ಸಾವಿರ ಕೋಟಿ ರೂ.ಗೂ ಹೆಚ್ಚು ಅನುದಾನ ನೀಡಲಾಗಿದೆ.
ಆರ್ಥಿಕವಾಗಿ ಸುಭದ್ರ: ‘2017-2018ರಿಂದ ಇಲ್ಲಿಯ ವರೆಗೆ 1.87ಲಕ್ಷ ಕೋಟಿ ರೂ.ಬಂದಿದ್ದರೆ ರಾಜ್ಯ ಅಭಿವೃದ್ಧಿಯಾಗುತ್ತಿತ್ತು. ಆರು ವರ್ಷಗಳಲ್ಲಿ 62 ಸಾವಿರ ಕೋಟಿ ರೂ.ಹಂಚಿಕೆಯಲ್ಲಿ ಅನ್ಯಾಯವಾಗಿದೆ. ಕೇಂದ್ರದಿಂದ ನ್ಯಾಯಯುತ ಪಾಲು ಬರದಿದ್ದರೂ ರಾಜ್ಯ ಆರ್ಥಿಕವಾಗಿ ಸುಭದ್ರವಾಗಿದ್ದೇವೆ. ಗ್ಯಾರಂಟಿ ಯೋಜನೆಗಳಿಗೆ 52,009 ಕೋಟಿ ರೂ.ಅಂದಾಜಿಸಲಾಗಿದೆ. ಇದಕ್ಕೂ ಹೆಚ್ಚು ಬೇಕಾದಲ್ಲಿ ನೀಡಲಾಗುವುದು ಎಂದು ಅವರು ತಿಳಿಸಿದರು.