‘ವಿದ್ಯುತ್ ಕಳ್ಳತನ’ ಮಾಡಿದ ಕುಮಾರಸ್ವಾಮಿಗೆ ನೈತಿಕತೆ ಇಲ್ಲ: ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಕೊಪ್ಪಳ, ನ.20: ವಿದ್ಯುತ್ ಕಳ್ಳತನ ಎಸಗಿ ದಂಡ ಕಟ್ಟಿರುವ ಎಚ್.ಡಿ.ಕುಮಾರಸ್ವಾಮಿಗೆ ನಮ್ಮನ್ನು ಟೀಕಿಸುವ ಯಾವ ನೈತಿಕತೆಯೂ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಕೊಪ್ಪಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಶಾಸಕ ಡಾ. ಯತೀಂದ್ರ ದುಡ್ಡಿನ ವ್ಯವಹಾರದ ಬಗ್ಗೆ ಮಾತನಾಡಿದ್ದಾರೆಯೇ?, ಕುಮಾರಸ್ವಾಮಿ ಬಳಿ ಈ ಬಗ್ಗೆ ಏನಾದರೂ ಪುರಾವೆ ಇದೆಯೇ ಎಂದು ಪ್ರಶ್ನಿಸಿದರು.
ಯತೀಂದ್ರರವರು ಸಿ.ಎಸ್.ಆರ್ ಫಂಡ್ ಬಗ್ಗೆ ಮಾತನಾಡಿದ್ದರೆ, ವರ್ಗಾವಣೆ ಬಗ್ಗೆ ಮಾತನಾಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸುತ್ತಿದ್ದಾರೆ. ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ವರ್ಗಾವಣೆಗಳ ಮೂಲಕ ದುಡ್ಡು ಮಾಡಿರುವುದು ಜಗಜ್ಜಾಹೀರವಾಗಿದೆ. ಅವರು ನಮ್ಮ ವಿರುದ್ಧ ಆರೋಪಗಳನ್ನು ಮಾಡುವ ನೈತಿಕತೆ ಇಲ್ಲ ಎಂದರು.
ಬಿಜೆಪಿ ನುಡಿದಂತೆ ನಡೆಯುವ ಪಕ್ಷ ಅಲ್ಲ. ಆದುದರಿಂದ, ಅವರ ಯಾವ ಭರವಸೆಗಳನ್ನು ಜನರು ನಂಬುವುದಿಲ್ಲ. ವಿಧಾನಸಭೆ ಚುನಾವಣೆ ಎದುರಿಸುತ್ತಿರುವ ರಾಜ್ಯಗಳಲ್ಲಿ ಬಿಜೆಪಿಯವರು ಈಗ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡುತ್ತಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಬಿಜೆಪಿಯವರು ಬಹಳ ವರ್ಷಗಳಿಂದ ಮಧ್ಯಪ್ರದೇಶದಲ್ಲಿ ಅಧಿಕಾರದಲ್ಲಿದ್ದರೂ, ಯಾವ ಪ್ರಗತಿಯನ್ನೂ ಸಾಧಿಸಿಲ್ಲ. ಈಗ ಪ್ರಗತಿ ಸಾಧಿಸುವುದಾಗಿ ಭರವಸೆಗಳನ್ನು ನೀಡುತ್ತಿದ್ದಾರೆ. ಅವರ ಮಾತುಗಳನ್ನು ಜನರು ನಂಬುವುದಿಲ್ಲ ಎಂದು ಅವರು ಟೀಕಿಸಿದರು.