ಕುಮಾರಸ್ವಾಮಿಯವರ ‘ಪೆನ್‍ಡ್ರೈವ್’ ಬಿಡುಗಡೆಗೆ ಮುಹೂರ್ತ ಕೂಡಿ ಬಂದಿಲ್ಲ: ಸಚಿವ ಸತೀಶ್ ಜಾರಕಿಹೊಳಿ ಲೇವಡಿ
ಬೆಳಗಾವಿ, ಜು.8: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪೆನ್‍ಡ್ರೈವ್ ಬಿಡುಗಡೆ ಮಾಡಲು ಸೂಕ್ತ ಸಮಯ, ಮುಹೂರ್ತ ಕೂಡಿ ಬರಬೇಕಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ವ್ಯಂಗ್ಯವಾಡಿದರು.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊಸ ಸರಕಾರ ಬಂದಾಗ ವರ್ಗಾವಣೆ ಸ್ವಾಭಾವಿಕ. ಕುಮಾರಸ್ವಾಮಿ ಅವರ ಪೆನ್‍ಡ್ರೈವ್‍ನಲ್ಲಿ ಏನಿದೆ ಎಂಬುದು ಹೊರಗೆ ಬಂದರೆ ಮಾತ್ರ ಗೊತ್ತಾಗುತ್ತೆ. ಪೆನ್‍ಡ್ರೈವ್ ಅವರ ಕಡೆಗೆ ಇದೆ. ಅದನ್ನು ಪ್ಲೇ ಮಾಡುವುದು, ಸಾಬೀತು ಮಾಡುವುದು ಅವರ ವಿವೇಚನೆಗೆ ಬಿಟ್ಟಿದ್ದು. ಅದಕ್ಕೆ ಅವರು ಸ್ವತಂತ್ರರು ಎಂದರು.
ಬಜೆಟ್ ಬಗ್ಗೆ ಜನ ಸಾಮಾನ್ಯರಿಂದ ಮೆಚ್ಚುಗೆ ವ್ಯಕ್ತವಾಗಿದೆ.ಆದರೆ, ರಾಜಕೀಯ ಮಾಡುವುದಕ್ಕಾಗಿ ವಿಪಕ್ಷದವರು ವಿರೋಧ ಮಾಡುತ್ತಾರೆ. ಗ್ಯಾರಂಟಿ ಯೋಜನೆಗೆ ಅನುದಾನ ಕೊಟ್ಟು, ಹೊಸ ಯೋಜನೆ ಘೋಷಣೆ ಮಾಡಲಾಗಿದೆ. ವಿಪಕ್ಷದವರ ಟೀಕೆಗೆ ಮಹತ್ವ ಕೊಡಬೇಕಿಲ್ಲ. ಈ ಬಜೆಟ್ ಸರಕಾರಕ್ಕೆ, ಪಕ್ಷಕ್ಕೆ ಅನುಕೂಲ ಆಗಲಿದೆ ಎಂದು ಅವರು ಹೇಳಿದರು.
ಪ್ರಾದೇಶಿಕ ಆಯುಕ್ತರು, ನಗರ ಪೊಲೀಸ್ ಆಯುಕ್ತರಂತ ಹುದ್ದೆಗಳಿಗೆ ಬೆಂಗಳೂರು ಬಿಟ್ಟು ಬೆಳಗಾವಿಗೆ ಬರಲು ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ ಎಂಬ ಮಾಧ್ಯಮಗಳ ಪ್ರಶ್ನೆಗೆ, ಹಿಂದೇಟು ಏನಿಲ್ಲ. ಬೆಂಗಳೂರು ಬಿಟ್ಟು ಅವರು ಬರಬೇಕಷ್ಟೇ. ಬಹಳಷ್ಟು ಜನ ಬೆಂಗಳೂರಿನಲ್ಲಿ ಇರಲು ಇಷ್ಟ ಪಡುತ್ತಾರೆ. ಆದರೆ, ನೌಕರಿ ಮಾಡಲು ರಾಜ್ಯದ ಎಲ್ಲಿಗೆ ಆದರೂ ಅವರು ಹೋಗಲೇಬೇಕು. ಈ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತರುತ್ತೇವೆ ಎಂದರು.