ಕುಂಭಮೇಳದಲ್ಲಿ ಕಾಲ್ತುಳಿತ ಪ್ರಕರಣ : ಇಬ್ಬರ ಮೃತ ದೇಹ ಹಸ್ತಾಂತರ, ಕುಟುಂಬಸ್ಥರ ಕಣ್ಣೀರು

ಬೆಂಗಳೂರು : ಉತ್ತರ ಪ್ರದೇಶದ ಪ್ರಯಾಗ್‍ರಾಜ್ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಸಾವನ್ನಪ್ಪಿದ ನಾಲ್ವರ ಪೈಕಿ ಇಬ್ಬರ ಮೃತದೇಹಗಳನ್ನು ಕುಟುಂಬಸ್ಥರಿಗೆ ಸರಕಾರಿ ಪ್ರಕ್ರಿಯೆಗಳ ಮೂಲಕ ಹಸ್ತಾಂತರ ಮಾಡಲಾಗಿದ್ದು, ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.
ಗುರುವಾರ ಸಂಜೆ ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ದಿಲ್ಲಿಯಿಂದ ವಿಮಾನದಲ್ಲಿ ನೇರವಾಗಿ ತರಲಾದ ಬೆಳಗಾವಿ ಶಿವಾಜಿ ನಗರದ ಮಹಾದೇವಿ ಬಾವನೂರ (48) ಹಾಗೂ ಶೆಟ್ಟಿ ಗಲ್ಲಿಯ ಅರುಣ ಕೋಪರ್ಡೆ (61) ಅವರ ಮೃತದೇಹಗಳನ್ನು ಜಿಲ್ಲಾಡಳಿತದಿಂದ ಬರಮಾಡಿಕೊಂಡಿತು. ಆನಂತರ, ಸರಕಾರಿ ಪ್ರಕ್ರಿಯೆಗಳನ್ನು ಮುಗಿಸಿದ ಬಳಿಕ ಮೃತದೇಹಗಳನ್ನು ಹಸ್ತಾಂತರ ಮಾಡಲಾಯಿತು.
ಈ ಸಂದರ್ಭದಲ್ಲಿ ಕುಟುಂಬ ಸದಸ್ಯರ ದುಃಖ ಉಮ್ಮಳಿಸಿದ್ದು, ಶವಗಳ ಪೆಟ್ಟಿಗೆ ಮೇಲೆಯೇ ಒರಗಿ ಕಣ್ಣೀರು ಹಾಕಿದರು. ಸ್ಥಳದಲ್ಲಿದ್ದ ಪೊಲೀಸರು ಅವರನ್ನು ಸಮಾಧಾನಪಡಿಸಿದ ದೃಶ್ಯ ಕಂಡಿತು. ಆನಂತರ, ಸಂಸದರಾದ ಜಗದೀಶ ಶೆಟ್ಟರ್, ಪ್ರಿಯಾಂಕಾ ಜಾರಕಿಹೊಳಿ, ಶಾಸಕರಾದ ಅಭಯ್ ಪಾಟೀಲ, ಆಸೀಫ್ ರಾಜು ಸೇಠ್, ಬೆಳಗಾವಿ ಜಿಲ್ಲಾಧಿಕಾರಿ ಮುಹಮ್ಮದ್ ರೋಷನ್ ಅವರು ಪುಷ್ಪನಮನ ಸಲ್ಲಿಸಿದರು. ಇದಾದ ಬಳಿಕ ಮೃತದೇಹಗಳನ್ನು ಎರಡು ಪ್ರತ್ಯೇಕ ಆಂಬ್ಯುಲೆನ್ಸ್ ಗಳಲ್ಲಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಮರಣೋತ್ತರ ಪರೀಕ್ಷೆಗೆ ಸಾಗಿಸಲಾಯಿತು.
ಈ ಕುರಿತು ಪ್ರತಿಕ್ರಿಯಿಸಿದ ಮುಹಮ್ಮದ್ ರೋಷನ್, ಪ್ರಯಾಗ್‍ರಾಜ್‍ನಲ್ಲಿ ದುರಾದೃಷ್ಟವಶಾತ್ ಮರಣೋತ್ತರ ಪರೀಕ್ಷೆ ಆಗಿಲ್ಲ. ದಿಲ್ಲಿಯಲ್ಲಿಯೂ ಪರೀಕ್ಷೆಗೆ ಪ್ರಯತ್ನಿಸಿದ್ದೆವು. ಆದರೆ, ವಿಮಾನ ವಿಳಂಬ ಆಗುವ ಹಿನ್ನೆಲೆಯಲ್ಲಿ ಅಲ್ಲಿಯೂ ಮಾಡಲು ಸಾಧ್ಯವಾಗಲಿಲ್ಲ. ಹಾಗಾಗಿ, ಮೊದಲು ಮೃತದೇಹಗಳನ್ನು ನಮ್ಮ ಜಿಲ್ಲೆಗೆ ತರಿಸಿಕೊಳ್ಳುವ ಉದ್ದೇಶದಿಂದ ಇಲ್ಲಿಯೇ ಮಾಡಲು ನಿರ್ಧರಿಸಿದ್ದು, ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಅವರ ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಾಯಿತು ಎಂದರು.