ಪ್ರಭಾರ ನೀಡದ ರಾಜ್ಯಪಾಲರ ನಡೆ ಪ್ರಶ್ನಿಸಿ ಕುವೆಂಪು ವಿವಿ ಪ್ರಾಧ್ಯಾಪಕಿ ಸಿ.ಗೀತಾ ಹೈಕೋರ್ಟ್‍ಗೆ
ಬೆಂಗಳೂರು, ಆ.23: ಕುಲಪತಿ ನಿವೃತ್ತಿಯಾದ ಬಳಿಕ ಸೇವಾ ಹಿರಿತನದ ಆಧಾರದ ಮೇಲೆ ತಮಗೆ ಪ್ರಭಾರದ ಜವಾಬ್ದಾರಿ ನೀಡಿಲ್ಲ ಎಂದು ಆರೋಪಿಸಿ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಸಿ.ಗೀತಾ ಅವರು ರಾಜ್ಯಪಾಲರ ವಿರುದ್ಧ ಹೈಕೋರ್ಟ್‍ನಲ್ಲಿ ಪ್ರಕರಣ ದಾಖಲಿಸಿದ್ದಾರೆ.
ವಿಶ್ವವಿದ್ಯಾಲಯದ ಕುಲಪತಿಯಾಗಿದ್ದ ಬಿ.ಪಿ.ವೀರಭದ್ರಪ್ಪ ಅವಧಿ 2023ರ ಆ.1ರಂದು ಪೂರ್ಣಗೊಂಡಿತ್ತು. ತೆರವಾದ ಸ್ಥಾನಕ್ಕೆ ಎರಡು ವಾರ ಕಳೆದರೂ ಪ್ರಭಾರ ಕುಲಪತಿಗಳನ್ನು ನೇಮಿಸಿರಲಿಲ್ಲ. ಆ.14ರಂದು ಅಧಿಸೂಚನೆ ಹೊರಡಿಸಿದ್ದ ರಾಜ್ಯಪಾಲರು ವಿಶ್ವವಿದ್ಯಾಲಯದ ವಾಣಿಜ್ಯ ವಿಭಾಗದ ಮುಖ್ಯಸ್ಥ ಎಸ್.ವೆಂಕಟೇಶ್ ಅವರಿಗೆ ಪ್ರಭಾರ ವಹಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದರು.
ಸೇವಾ ಹಿರಿತನದಲ್ಲಿ ಮೊದಲ ಸ್ಥಾನದಲ್ಲಿದ್ದ ಸಿ.ಗೀತಾ ಅವರು ಹಿಂದೆ ಪ್ರಭಾರ ಕುಲಸಚಿವರಾಗಿ ಕೆಲಸ ಮಾಡಿದ್ದರು. ಅಲ್ಲದೆ, ಸೇವಾ ಹಿರಿತನದಲ್ಲಿ ಇಬ್ಬರ ನಂತರದ ಸ್ಥಾನದಲ್ಲಿರುವ ವೆಂಕಟೇಶ್ ಅವರಿಗೆ ಪ್ರಭಾರದ ಜವಾಬ್ದಾರಿ ನೀಡಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಇದು ನಿಯಮಬಾಹಿರ ಕ್ರಮ ಎಂದು ದೂರಿರುವ ಗೀತಾ ಅವರು ರಾಜ್ಯಪಾಲ, ಉನ್ನತ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಭಾರ ಕುಲಪತಿ ವೆಂಕಟೇಶ್ ಅವರನ್ನು ಪ್ರತಿವಾದಿಗಳನ್ನಾಗಿಸಿ ಕೋರ್ಟ್‍ನಲ್ಲಿ ಪ್ರಕರಣ ದಾಖಲಿಸಿದ್ದಾರೆ. ವಿವರಣೆ ಕೇಳಿ ಕೋರ್ಟ್ ಎಲ್ಲ ಪ್ರತಿವಾದಿಗಳಿಗೂ ನೋಟಿಸ್ ಜಾರಿ ಮಾಡಿದೆ.