ಮಕ್ಕಳಿಗೆ ಮೊಟ್ಟೆ ಕೊಟ್ಟು ಕಸಿದುಕೊಳ್ಳುವ ವಿಡಿಯೋ ವೈರಲ್ | ಅಂಗನವಾಡಿ ಕಾರ್ಯಕರ್ತೆ, ಸಹಾಯಕಿ ಅಮಾನತು : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಮಕ್ಕಳಿಗೆ ಮೊಟ್ಟೆ ಕೊಟ್ಟು ಕಸಿದುಕೊಳ್ಳುವ ಕಾರ್ಯಕರ್ತೆಯರ ವಿಡಿಯೋ ವೈರಲ್
ಬೆಂಗಳೂರು : ಅಂಗನವಾಡಿ ಮಕ್ಕಳ ತಟ್ಟೆಗೆ ಬಡಿಸಿದ್ದ ಮೊಟ್ಟೆಯನ್ನು ಎತ್ತಿಕೊಳ್ಳುತ್ತಿದ್ದ ಕೊಪ್ಪಳದ ಗುಂಡೂರು ಗ್ರಾಮದ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೂಚನೆ ಮೇರೆಗೆ ಅಮಾನತುಗೊಳಿಸಲಾಗಿದೆ.
ಕೊಪ್ಪಳದ ಗುಂಡೂರು ಗ್ರಾಮದ ಅಂಗನವಾಡಿಯ ಕಾರ್ಯಕರ್ತೆ ಲಕ್ಷ್ಮೀ ಹಾಗೂ ಸಹಾಯಕಿ ಶಹನಾಝ್ ಬೇಗಂ ಅವರ ಮೊಟ್ಟೆ ವಂಚನೆ ವಿಡಿಯೋ ವೈರಲ್ ಆಗಿತ್ತು. ಇದನ್ನು ಗಮನಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ತಕ್ಷಣ ಇಲಾಖೆ ಅಧಿಕಾರಿಗಳಿಗೆ ಫೋನ್ ಮಾಡಿ, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯನ್ನು ಸಸ್ಪೆಂಡ್ ಮಾಡುವಂತೆ ಸೂಚಿಸಿದ್ದಾರೆ. ಇಡೀ ಪ್ರಕರಣದ ವರದಿ ನೀಡುವಂತ ಆದೇಶಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ದೇವರು ಕೊಟ್ಟರೂ ಪೂಜಾರಿ ಕೊಡಲ್ಲ ಎಂಬ ಮಾತಿದೆ. ಹಾಗೇ ಸರಕಾರ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಲೆಂದು ಅಂಗನವಾಡಿ ಮಕ್ಕಳಿಗೆ ಮೊಟ್ಟೆ ಕೊಡುತ್ತಿದೆ. ನಾನು ಕೂಡ ಅಂಗನವಾಡಿಗಳಲ್ಲಿ ಶಿಸ್ತನ್ನು ತರಲು, ಬದಲಾವಣೆ ತರಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದೇನೆ. ಆದರೆ ಗುಂಡೂರಿನಲ್ಲಿ ಅಂಗನವಾಡಿ ಕಾರ್ಯಕರ್ತೆಯೇ ಮಕ್ಕಳ ಪ್ಲೇಟ್ ನಲ್ಲಿದ್ದ ಮೊಟ್ಟೆ ಎತ್ತಿಕೊಂಡಿದ್ದಾರೆ. ಮಕ್ಕಳು ತಿನ್ನಲು ಮುಂದಾದ ಮೊಟ್ಟೆ ಕಸಿದುಕೊಂಡಿದ್ದಾರೆ. ವಿಡೀಯೋ ನೋಡಿದರೆ ಕರುಳು ಚುರ್ ಎನ್ನುತ್ತದೆ. ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರನ್ನು ಅಮಾನತುಗೊಳಿಸಲಾಗಿದೆ. ಇಬ್ಬರನ್ನೂ ಶಾಶ್ವತವಾಗಿ ವಜಾಗೊಳಿಸಲುಸೂಚಿಸಿದ್ದೇನೆ. ಜೊತೆಗೆ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಆದೇಶಿಸಿದ್ದೇನೆ ಎಂದು ತಿಳಿಸಿದ್ದಾರೆ.
ಅಲ್ಲದೆ, ಸಂಬಂಧಿಸಿದ ಸಿಡಿಪಿಒ ವಿರುದ್ಧವೂ ಕ್ರಮಕ್ಕೆ ಸೂಚಿಸಿದ್ದೇನೆ ಎಂದು ಸಚಿವರು ತಿಳಿಸಿದ್ದಾರೆ.