ಸೈಬರ್ ವಂಚಕರ ಮೋಸದ ಜಾಲಕ್ಕೆ ಬಲಿಯಾಗಬೇಡಿ : ಲಕ್ಷ್ಮೀ ಹೆಬ್ಬಾಳ್ಕರ್
ಬೆಳಗಾವಿ: ಫೋಷಣ್ ಆ್ಯಪ್ ಹ್ಯಾಕ್ ಆಗಿದೆ ಎನ್ನುವ ಮಾಹಿತಿ ಕೇಳಿಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಮಹಿಳೆಯರು, ಗರ್ಭಿಣಿಯರು ಸೈಬರ್ ವಂಚಕರ ಮೋಸದ ಜಾಲಕ್ಕೆ ಬಲಿಯಾಗಬೇಡಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗರ್ಭಿಣಿಯರು, ಮಹಿಳೆಯರ ಮಾಹಿತಿಯನ್ನು ಸೈಬರ್ ವಂಚಕರು ಆ್ಯಪ್‍ನಲ್ಲಿ ತಿಳಿದುಕೊಂಡು ಮೊಬೈಲ್ ಮೂಲಕ ವಂಚಿಸುತ್ತಿರುವ ಪ್ರಕರಣಗಳು ಕೇಳಿಬರುತ್ತಿದ್ದು, ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಎಂದರು.
ಪೋಷಣ್ ಆ್ಯಪ್ ಅನ್ನು ಕೇಂದ್ರ ಸರಕಾರ ನಿರ್ವಹಣೆ ಮಾಡುತ್ತದೆ. ವಂಚನೆಯಾಗುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದ ತಕ್ಷಣ ಕೇಂದ್ರದ ಗಮನ ಸೆಳೆದಿದ್ದೇವೆ. ಜೊತೆಗೆ ನಮ್ಮ 70 ಸಾವಿರ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರಿಗೆ ಸಂದೇಶ ಕಳುಹಿಸಿ, ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಮೋಸದ ಜಾಲ ಪತ್ತೆಯಾದ ತಕ್ಷಣ ಜನರಲ್ಲಿ ಜಾಗೃತಿ ಮಾಡುವುದಕ್ಕೆ ಕ್ರಮಕೈಗೊಂಡಿದ್ದೇವೆ. ಜನ ಯಾರೂ ಇದರಲ್ಲಿ ಮೋಸ ಹೋಗಬಾರದು ಎಂದು ಲಕ್ಷ್ಮೀ ಹೆಬ್ಬಾಳ್ಕರ್ ಮನವಿ ಮಾಡಿದರು.