ಜ.12ರಂದು ಯುವನಿಧಿ ಯೋಜನೆಗೆ ಚಾಲನೆ; ನಾವು ನುಡಿದಂತೆ ನಡೆದಿದ್ದೇವೆ: ಸಚಿವ ಮಧುಬಂಗಾರಪ್ಪ
ಶಿವಮೊಗ್ಗ: ಜ.12ರಂದು ಕಾಂಗ್ರೆಸ್ ಸರಕಾರದ 5ನೇ ಗ್ಯಾರಂಟಿ ಯೋಜನೆ ಯುವನಿಧಿಗೆ ಶಿವಮೊಗ್ಗ ಜಿಲ್ಲೆಯಿಂದ ಅಧಿಕೃತ ಚಾಲನೆ ದೊರೆಯಲಿದ್ದು, ನಾವು ನುಡಿದಂತೆ ನಡೆದಿದ್ದೇವೆ. ಯುವಕರು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಿ ಎಂದು ಸಚಿವ ಮಧುಬಂಗಾರಪ್ಪ ಹೇಳಿದ್ದಾರೆ.
ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಯುವ ನಿಧಿ ಯೋಜನೆಯ ಉದ್ಘಾಟನಾ ಸಮಾರಂಭದ ಪೂರ್ವಬಾವಿ ಸಭೆಯಲ್ಲಿ ಅವರು ಮಾತನಾಡಿದರು. ಲಕ್ಷಾಂತರ ಜನ ಭಾಗವಹಿಸುವ ನಿರೀಕ್ಷೆ ಇದೆ. ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದೇವೆ. ಕೌಶಲ್ಯಾಭಿವೃದ್ಧಿ ಇಲಾಖೆ ಈಗಾಗಲೇ ಸಿದ್ಧತೆ ನಡೆಸಿದೆ. ಕಾರ್ಯಕರ್ತರು ನಿರುದ್ಯೋಗಿ ಯುವಕರ ಗಮನಕ್ಕೆ ತನ್ನಿ, ಯುವಕರಲ್ಲಿ ನಾವು ಪದವಿ ಮುಗಿಸಿದರು ಪೋಷಕರಿಗೆ ಭಾರವಾಗಿದ್ದೇವೆ ಎಂಬ ಆತಂಕ ಬೇಡ ಎಂದರು.
ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ ಸುಧಾಕರ್ ಮಾತನಾಡಿ, ಈಗಾಗಲೇ ಜನಪ್ರಿಯ 4 ಗ್ಯಾರಂಟಿಗಳನ್ನು ನೀಡಿದ್ದೇವೆ. ಜನರ ಇಟ್ಟ ವಿಶ್ವಾಸಕ್ಕೆ ನಾವು ಋಣಿಯಾಗಿದ್ದೇವೆ. ಅರ್ಹ ಫಲಾನುಭವಿಗಳನ್ನು ಇಲಾಖೆ ಗುರುತಿಸಿ, ಈ ಯೋಜನೆಯಂತೆ ಯುವಕರಿಗೆ ಸಹಕಾರ ನೀಡುತ್ತೇವೆ ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್‌ಪ್ರಕಾಶ್ ಪಾಟೀಲ್ ಮಾತನಾಡಿ, ಶಿವಮೊಗ್ಗದಲ್ಲಿ ಜ.12ರಂದು ಯುವ ನಿಧಿ ಯೋಜನೆಯಡಿಯಲ್ಲಿ ಸೂಕ್ತ ಫಲಾನುಭವಿ ಪದವಿದರರಿಗೆ 3000, ಡಿಪ್ಲೋಮೋ ಪದವಿದರರಿಗೆ 1,500 ಧನಸಹಾಯ ನೀಡಲಿದ್ದು, ಮುಖ್ಯಮಂತ್ರಿಗಳು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಈಗಾಗಲೇ 25 ಸಾವಿರಕ್ಕೂ ಹೆಚ್ಚು ಯುವಕರು ನೊಂದಾಯಿಸಿದ್ದಾರೆ. ಇದಕ್ಕೆ ಸಮಯದ ಮಿತಿಯಿಲ್ಲ. ಯೋಜನೆ ಜಾರಿಯಾದ ನಂತರವು ಸತತವಾಗಿ ನೊಂದಾಣಿ ಮಾಡಿಸಿಕೊಳ್ಳಬಹುದು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧ್ಯಕ್ಷ ಹೆಚ್.ಎಸ್.ಸುಂದರೇಶ್, ಭದ್ರಾವತಿ ಶಾಸಕ ಸಂಗಮೇಶ್, ಸಾಗರ ಶಾಸಕ ಬೇಳೂರು ಗೋಪಾಲಕೃಷ್ಣ ಪ್ರಮುಖರಾದ ಆಯನೂರು ಮಂಜುನಾಥ್, ಆರ್.ಎಂ. ಮಂಜುನಾಥ್‌ಗೌಡ, ಎಂ.ಶ್ರೀಕಾಂತ್, ಆರ್.ಪ್ರಸನ್ನಕುಮಾರ್, ಇಸ್ಮಾಯಿಲ್ ಖಾನ್, ಬಲ್ಖೀಶ್ ಬಾನು, ಅನಿತಾಕುಮಾರಿ, ಕಲಗೋಡು ರತ್ನಾಕರ್, ಖಲೀಂ ಪಾಷಾ, ದೇವೇಂದ್ರಪ್ಪ, ಇಕ್ಕೇರಿ ರಮೇಶ್ ಮತ್ತಿತರರು ಇದ್ದರು.